ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಹತೋಟಿಗೆ ಸರ್ಕಾರ ಹರಸಾಹಸ ನಡೆಸುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ತಜ್ಞರೊಂದಿಗೆ ಸಿಎಂ ಚರ್ಚೆ ನಡೆಸುತ್ತಿದ್ದು, ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಮನೆಯಲ್ಲೇ ಚಿಕತ್ಸೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಸಾಂಸ್ಥಿಕ ಕ್ವಾರಂಟೈನ್ಗೂ ಗುಡ್ ಬೈ ಹೇಳಲು ಸರ್ಕಾರ ಮುಂದಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸೋಂಕಿತರ ಸಂಪರ್ಕಿತರಿಗೆ ಇನ್ನು ಮುಂದೆ ಹೋಂ ಕ್ವಾರಂಟೈನ್ ಮಾಡಲು ಉದ್ದೇಶಿಸಲಾಗಿದೆ. ಇಂಥಹವರನ್ನು ಮೊಬೈಲ್ ಟ್ರ್ಯಾಕಿಂಗ್ ಮೂಲಕ ತೀವ್ರ ನಿಗಾ ಇಡುವುದು. ರೋಗ ಲಕ್ಷಣ ಇಲ್ಲದ ಸೋಂಕಿತರಿಗೂ ಮನೆಯಲ್ಲೇ ಚಿಕಿತ್ಸೆ ಕೊಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಮನೆಯಲ್ಲೇ ಉಳಿಯುವ ‘ಎ’ ಕೆಟಗರಿ ರೋಗಿಗಳಿಗೆ ಆಗಿಂದಾಗೆ ವೈದ್ಯರಿಂದ ಸಲಹೆ ನೀಡುವುದು. ‘ಬಿ’ ಮತ್ತು ‘ಸಿ’ ಕೆಟಗರಿ ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಬಗ್ಗೆ ಇಂದಿನ ಮಹತ್ವದ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೈಲೆಂಟ್ ಆದ ಸಚಿವ ಅಶೋಕ್...
ಸಚಿವ ಡಾ.ಕೆ. ಸುಧಾಕರ್ ವಾಪಾಸ್ ಆದ ನಂತರ ಕೋವಿಡ್ ಬೆಂಗಳೂರು ಉಸ್ತುವಾರಿ ಹೊತ್ತಿದ್ದ ಕಂದಾಯ ಸಚಿವ ಆರ್. ಅಶೋಕ್ ಸೈಲೆಂಟ್ ಆಗಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಿಂದ ಆರ್. ಅಶೋಕ್ ದೂರ ಉಳಿದಿದ್ದಾರೆ.
ಕೋವಿಡ್ ನಿರ್ವಹಣೆಯ ಜವಾಬ್ದಾರಿ ನನ್ನದು ಎಂದು ಸಚಿವ ಸುಧಾಕರ್ ಹೇಳಿದ್ದರು ಎನ್ನಲಾಗಿದೆ. ಸುಧಾಕರ್ ಹೇಳಿಕೆಯಿಂದ ಅಸಮಾಧಾನಗೊಂಡಿದ್ದಾರಾ ಸಚಿವ ಆರ್. ಅಶೋಕ್ ಎಂಬ ಪ್ರಶ್ನೆ ಎದುರಾಗಿದೆ.
ಸಚಿವ ಸುಧಾಕರ್ ಹೋಂ ಕ್ವಾರೆಂಟೈನ್ನಲ್ಲಿದ್ದಾಗ ಸಿಎಂ ಯಡಿಯೂರಪ್ಪ ಅವರು, ಬೆಂಗಳೂರು ಕೋವಿಡ್ ಉಸ್ತುವಾರಿಯನ್ನು ಆರ್. ಅಶೋಕ್ ಗೆ ವಹಿಸಿದ್ದರು. ಇದೀಗ ಸುಧಾಕರ್ ವಾಪಸ್ ಬಂದ ತಕ್ಷಣ ಅಶೋಕ್ ಹಿಂದೆ ಸರಿದಿರುವುದು ಮತ್ತು ಸಭೆಗೆ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.