ಬೆಂಗಳೂರು : ಹಬ್ಬ-ಹರಿದಿನ ಬಿಟ್ಟು ಕೆಲಸ ಮಾಡುತ್ತಿರುವ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದದಲ್ಲೇ ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪನವರು ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
1965ರಲ್ಲಿ ರಾಜ್ಯದಲ್ಲಿ ಪೊಲೀಸ್ ಕಾಯ್ದೆ ಜಾರಿಗೆ ಬಂದ ದಿನದ ಅಂಗವಾಗಿ ಏ. 2ರಂದು ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತದೆ. ಇಂದು ಕೂಡ ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವಿತ್ತು. ಸಮಾರಂಭದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಜಿಪಿ ಪ್ರವೀಣ್ ಸೂದ್, ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.
ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ 125 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2020 ಸಾಲಿನ ಮುಖ್ಯಮಂತ್ರಿಗಳ ಪದಕವನ್ನ ಸಿಎಂ ಬಿಎಸ್‌ವೈ ಪ್ರದಾನ ಮಾಡಿದರು.
ಬಳಿಕ ಸಿಎಂ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಪಾಲಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಿಕೆಯಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಉಗ್ರ ಹಾಗೂ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಪದವಿ ಪಡೆದ ಎಲ್ಲಾ ಪೊಲೀಸರಿಗೂ ಅಭಿನಂದಿಸುತ್ತೇನೆ. ನಿಮ್ಮ ಸೇವೆ ಇತರರಿಗೂ ಮಾದರಿ ಎಂದು ಆಶಿಸಿದರು.
ಓದಿ: ಮಾಸ್ಕ್ ಹಾಕಿಕೊಳ್ಳುವಂತೆ ಸಚಿವ ಕೆ.ಎಸ್.ಈಶ್ವರಪ್ಪಗೆ ಭದ್ರತಾ ಸಿಬ್ಬಂದಿ ಮನವಿ-VIDEO
ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸೈಬರ್ ಕ್ರೈಮ್ ಬೇಧಿಸುವಲ್ಲಿ ಪೊಲೀಸರು ದಕ್ಷತೆ ಮೆರೆದಿದ್ದಾರೆ. ಡ್ರಗ್ಸ್ ಜಾಲ ಸದೆ ಬಡಿದಿದ್ದಾರೆ. ಜಿಲ್ಲೆಗೊಂದು ಎಫ್ಎಸ್ಎಲ್ ತೆರೆಯುವ ಚಿಂತನೆ ಇದೆ. ಕಾಲೇಜು ಹೆಣ್ಣುಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ಕೊಡಲಿದ್ದೇವೆ. ನಮ್ಮ ಪೊಲೀಸರು ಎಂಥ ಸವಾಲನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದರು.
ಕ್ಲಿಷ್ಟ ಪರಿಸ್ಥಿತಿಯಲ್ಲೂ ಪೊಲೀಸ್ ಚಾಣಾಕ್ಷತೆ : ಸಂಕೀರ್ಣ ಕೇಸ್ಗಳನ್ನು ನಮ್ಮ ಪೊಲೀಸರು ಬಗೆಹರಿಸಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲಾ ಕಡೆಯಿಂದ ಟೀಕೆ ಟಿಪ್ಪಣಿ ಬರುತ್ತಿವೆ. ನಮ್ಮ ಗುರಿ ಮತ್ತು ದಾರಿ ತಪ್ಪಿಸುವ ಯತ್ನ ನಡೆಯುತ್ತಿವೆ. ಆದರೆ, ನಮ್ಮ ಪೊಲೀಸರು ತಾಳ್ಮೆಯಿಂದ ಟೀಕೆ ಟಿಪ್ಪಣಿ ಸಹಿಸಿಕೊಂಡು ಉತ್ತರ ಕೊಡುವ ವಿಶ್ವಾಸ ವ್ಯಕ್ತಪಡಿಸಿದರು.