ಬೆಂಗಳೂರು: ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಬರುತ್ತೆ ಆ ಜಿಲ್ಲೆಗಳಲ್ಲಿ ಯಾವ ವಿನಾಯಿತಿ ಕೊಡಬೇಕು ಅಂತ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇನ್ನು ಮೂರ್ನಾಲ್ಕು ದಿನ ನಾವು ನೋಡ್ತೇವೆ. ಯಾವ್ಯಾವ ಜಿಲ್ಲೆಯಲ್ಲಿ ಏನಿದೆ ಗಮನಿಸ್ತೇವೆ. ನಂತರ ಕ್ರಮ ಕೈಗೊಳ್ತೇವೆ ಎಂದು ಹೇಳಿದರು.
ಮೈಸೂರು ಅಧಿಕಾರಿಗಳ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯ ಕಾರ್ಯದರ್ಶಿಗಳು ನಿನ್ನೆ ಹೋಗಿ ಚರ್ಚೆ ಮಾಡಿ ಬಂದಿದ್ದಾರೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ಕೊಟ್ಟಿದ್ದಾರೆ. ಇಂದು ಸಂಜೆ ಯಾವ ಕ್ರಮ ಅಂತ ಚರ್ಚಿಸಿ ನಿರ್ಧಾರ ತಗೆದುಕೊಳ್ತೇವೆ ಎಂದರು.
ಸೆಕೆಂಡ್ ಪಿಯುಸಿಗೆ ಎಸ್ಎಸ್ಎಲ್ಸಿ ಅಂಕಗಳಾಧರಿಸಿ ಗ್ರೇಡ್ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲದರ ಬಗ್ಗೆ ಚರ್ಚೆ ನಡೀತಿದೆ. ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜುಲೈನಲ್ಲಿ ಮಾಡಲು ಸಚಿವರು ಯೋಚಿಸ್ತಿದ್ದಾರೆ. ಕೆಲವರು ಪರೀಕ್ಷೆ ವಿರೋಧಿಸುತ್ತಿರುವುದು ಗಮನಕ್ಕೆ ಬಂದಿದೆ. ಎಲ್ಲದರ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತಗೆದುಕೊಳ್ಳುತ್ತೇವೆ ಎಂದರು.
ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್ ಬಿಡುಗಡೆ:
ಇದೇ ವೇಳೆ ಸಿಎಂ ಕಾರ್ಮಿಕರಿಗೆ ಘೋಷಿಸಿದ್ದ ಪರಿಹಾರ ಪ್ಯಾಕೇಜ್ ಹಣವನ್ನು ಫಲಾನುಭವಿ ಕಾರ್ಮಿಕರ ಖಾತೆಗೆ ವರ್ಗಾವಣೆ ಮಾಡಿದರು.
ನಾವು ಪ್ಯಾಕೇಜ್ ಘೋಷಣೆ ಮಾಡಿದ್ದೆವು. ಮಾಧ್ಯಮಗಳಲ್ಲಿ ಯಾವಾಗ ಹಣ ಬಿಡುಗಡೆ ಎಂದು ಕೇಳುತ್ತಿದ್ದರು. ಇವತ್ತು ಕಟ್ಟಡ ಕಾರ್ಮಿಕರಿಗೆ ತಲಾ ₹3 ಸಾವಿರ ಹಣ ಬಿಡುಗಡೆ ಮಾಡಿದ್ದೇವೆ. ಒಟ್ಟು 25 ಲಕ್ಷ ಕಾರ್ಮಿಕರಿಗೆ ಹಣ ವರ್ಗಾವಣೆ ಮಾಡ್ತಿದ್ದೇವೆ. ಒಟ್ಟು ₹749 ಕೋಟಿ ಹಣ ಬಿಡುಗಡೆ ಮಾಡ್ತಿದ್ದೇವೆ ಎಂದರು.
4 ಲಕ್ಷ ಜನರಿಗೆ ಇಂದು ₹110 ಕೋಟಿ ರಿಲೀಸ್ ಮಾಡಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದರು.