ಬೆಂಗಳೂರು: ಜೂನ್ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಬಿಜೆಪಿಯಿಂದ ಸ್ಪರ್ಧಿಸಲಿರುವ ಪುಟ್ಟಣ್ಣರನ್ನು ಗೆಲ್ಲಿಸುವಂತೆ ಶಿಕ್ಷಕರು, ಉಪನ್ಯಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆಗೆ ಕೆಂಗೇರಿಯ ಸೂಲಿಕೆರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಸಮಾರಂಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಸತಿ ಸಚಿವ ವಿ ಸೋಮಣ್ಣ, ಶಾಸಕ ಗೋಪಾಲಯ್ಯ, ಜೆಡಿಎಸ್ ಉಚ್ಚಾಟಿತ ಎಂಎಲ್ಸಿ ಪುಟ್ಟಣ್ಣ ಸೇರಿದಂತೆ ನೂರಾರು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಎಂಗೆ ಬೆಳ್ಳಿ ಗದೆ ನೀಡಿ ಪುಟ್ಟಣ್ಣ ಸನ್ಮಾನಿಸಿದರು.
ಸಿಎಂ ಬಿಎಸ್ವೈ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಪುಟ್ಟಣ್ಣ ಬಿಜೆಪಿ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದು ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಒಬ್ಬ ಶಿಕ್ಷಕ ಪ್ರತಿನಿಧಿ ಹೇಗಿರಬೇಕು ಅನ್ನೋದಕ್ಕೆ ಪುಟ್ಟಣ್ಣ ಮಾದರಿ. ಸ್ವಪ್ನದಲ್ಲೂ ಶಿಕ್ಷಕರ ಬಗ್ಗೆಯೇ ಯೋಚನೆ ಮಾಡ್ತಾರೆ ಎಂದು ಹೊಗಳಿದರು.
ಪುಟ್ಟಣ್ಣ ಮಾತನಾಡಿ, 2008ರಲ್ಲೇ ಯಡಿಯೂರಪ್ಪನವರು ನನ್ನನ್ನು ಬಿಜೆಪಿಗೆ ಕರೆದರು. ಆಗಲೇ ಹೋಗಿದ್ದರೆ ನಾನು ಇಷ್ಟೊತ್ತಿಗಾಗಲೇ ಸಚಿವನಾಗಿರುತ್ತಿದ್ದೆ. ಆದರೂ ನಾನು ನಿಮ್ಮ ತರಹ ಮನುಷ್ಯ ಅಲ್ವಾ? ಕೆಲ ನಂಬಿಕೆಗಳ ಮೇಲೆ ಉಳಿದುಕೊಂಡಿದ್ದೆ. ಈಗ ಯಡಿಯೂರಪ್ಪನವರ ಜೊತೆ ಸೇರಿದ್ದೇನೆ. ನಾನು ಮುಂದಿನ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಎಲ್ಲ ಶಿಕ್ಷಕರು, ಉಪನ್ಯಾಸಕರು ನನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.