ಬೆಂಗಳೂರು: ಏಸು ಪ್ರತಿಮೆ ನಿರ್ಮಾಣ ವಿಚಾರ ಇಂದು ಸಂಪುಟ ಸಭೆಯಲ್ಲೂ ಪ್ರತಿಧ್ವನಿಸಿತು. ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು.
ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಕಿವಿಮಾತು ಹೇಳಿದ ಸಿಎಂ, ಏಸು ಪ್ರತಿಮೆ ವಿರುದ್ಧ ಧ್ವನಿ ಎತ್ತಿ ರಾಡಿ ಮಾಡಿಕೊಳ್ಳಬೇಡಿ. ಸರ್ಕಾರಿ ಗೋಮಾಳ ಜಮೀನು ಕಾನೂನಾತ್ಮಕವಾಗಿ ಇದೆಯೋ ಇಲ್ಲವೋ ನೋಡೋಣ. ಹೆಚ್ಚಿಗೆ ಆ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಬೇಡಿ. ಇದರಿಂದ ಡಿಕೆಶಿಗೆ ರಾಜಕೀಯ ಲಾಭ ಆಗುತ್ತದೆ ಎಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ವರದಿ ಕೇಳಿದ್ದು, ಜಿಲ್ಲಾಧಿಕಾರಿ ವರದಿ ಕೊಟ್ಟ ಬಳಿಕ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ಸುಮ್ಮನೆ ಆಗೋಣ. ವಿಷಯ ದೊಡ್ಡದು ಮಾಡಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ಗೆ ಲಾಭ ಮಾಡಿಕೊಡೋದು ಬೇಡ ಎಂದು ಕಿವಿಮಾತು ಹೇಳಿದರು ಎಂದು ತಿಳಿದು ಬಂದಿದೆ.
ಈಗಾಗಲೇ ಪೌರತ್ವ ಕಾಯ್ದೆಯ ಬಿಸಿ ಇದೆ. ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿರೋಧ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು. ಈ ವಿಚಾರವನ್ನೇ ಡಿಕೆಶಿ ಬಂಡವಾಳವಾಗಿಸಿ ಲಾಭ ಪಡೆಯುತ್ತಾರೆ. ಹೀಗಾಗಿ ಏಸು ಪ್ರತಿಮೆ ವಿಚಾರವಾಗಿ ಹುಷಾರಾಗಿ ಹೆಜ್ಜೆ ಇಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸಿಎಂ ಸೂಚನೆ ನೀಡಿದರು ಎನ್ನಲಾಗಿದೆ.