ಬೆಂಗಳೂರು: ಎರಡನೇ ಹಂತದ ಲಾಕ್ಡೌನ್ ಜಾರಿಯಾದ ಹಿನ್ನಲೆಯಲ್ಲಿ ಮಾರ್ಗಸೂಚನೆ ಪಾಲನೆ ಕುರಿತು ನಾಲ್ವರು ಹಿರಿಯ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಬಿಎಸ್ವೈ ಅವರು ಹಿರಿಯ ಸಚಿವರ ತುರ್ತು ಸಭೆ ನಡೆಸಿದರು. ಈಗಾಗಲೇ ಕೋವಿಡ್-19 ಟಾಸ್ಕ್ ಫೋರ್ಸ್ ರಚನೆ ಮಾಡಿದ್ದರೂ ಹೆಚ್ಚುವರಿಯಾಗಿ ಹೊಣೆಗಾರಿಕೆ ಹಂಚಿಕೆ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ವಲಸೆ ಕಾರ್ಮಿಕರ ಸಮಸ್ಯೆ ಹಾಗೂ 19 ದಿನಗಳ ಲಾಕ್ಡೌನ್ ಪಾಲನೆಗೆ ನೀಡಿರುವ ಮಾರ್ಗಸೂಚಿ ಅನುಷ್ಠಾನ ಕುರಿತು ಸಚಿವರೊಂದಿಗೆ ಸಿಎಂ ಮಹತ್ವದ ಸಮಾಲೋಚನೆ ನಡೆಸಿದ್ರು.
ಈ ಸಭೆಯಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ಕಾರ್ಮಿಕರ ವಿದ್ಯಮಾನ ರಾಜ್ಯದಲ್ಲಿ ಆಗದಂತೆ ಮುನ್ನೆಚ್ಚರಿಕಾ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಇದರ ಜವಾಬ್ದಾರಿಯನ್ನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ನೀಡಲಾಯಿತು. ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಕಾರ್ಮಿಕರು ವಲಸೆಗೆ ಮುಂದಾಗದ ರೀತಿ ನೋಡಿಕೊಳ್ಳುವ ಹೊಣೆಗಾರಿಕೆ ಇನ್ನು ಸುರೇಶ್ ಕುಮಾರ್ ಅವರದ್ದಾಗಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾನೂನು ಸುವ್ಯವಸ್ಥೆ ಕುರಿತು ಮತ್ತಷ್ಟು ಪರಿಣಾಮಕಾರಿಯಾಗಿ ಕೆಕಸ ಮಾಡಬೇಕು ಎನ್ನುವ ಸೂಚನೆಯೊಂದಿಗೆ ಕೋವಿಡ್-19 ಕಾನೂನು ಸುವ್ಯವಸ್ಥೆ ಹೊಣೆಗಾರಿಕೆ ನೀಡಲಾಗಿದೆ. ಡಿಸಿಎಂ ಡಾ. ಅಶ್ವತ್ಥನಾರಾಯಣ್ ಅವರಿಗೆ ಕೃಷಿ ವಲಯದ ಜವಾಬ್ದಾರಿ ಹಂಚಿಕೆ ಮಾಡಿದ್ದು, ಕೋವಿಡ್-19 ಲಾಕ್ ಡೌನ್ ಮುಗಿಯುವವರೆಗೂ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಗಾರಿಕೆ ನೀಡಲಾಗಿದೆ. ಇನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ನಗರದ ಉಸ್ತುವಾರಿ ವಹಿಸಿದ್ದು, ಕೋವಿಡ್-19 ಮುಗಿಯುವವರೆಗೆ ನಗರದಲ್ಲಿ ಕೊರೊನಾ ಸಂಬಂಧಿತ ವಿಷಯಗಳ ಕುರಿತು ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು.