ಬೆಂಗಳೂರು: ರಾಜ್ಯದ ಇತರ ನಗರಗಳಾದ ಈಗಾಗಲೇ ಚಟುವಟಿಕೆಯ ಸ್ಟಾರ್ಟ್‌ಅಪ್ ವ್ಯವಸ್ಥೆಗಳು ಇರುವಂತಹ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಮತ್ತು ಬೆಳಗಾವಿಯಂತಹ ನಗರಗಳಲ್ಲಿ ಹೂಡಿಕೆ ಮಾಡುವಂತೆ ಐಟಿಬಿಟಿ ಕಂಪನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ನಗರದ ಖಾಸಗಿ ತಾರಾ ಹೋಟೆಲ್ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳೊಂದಿಗೆ ಅವರು ಸಂವಾದ ನಡೆಸಿದರು. ಸಂವಾದದಲ್ಲಿ ಬ್ರಿಟನ್, ಇಸ್ರೇಲ್, ನೆದರ್ಲೆಂಡ್, ಜಪಾನ್, ಸ್ವಿಜರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಶ್ರೀಲಂಕಾ ಸೇರಿದಂತೆ 15ಕ್ಕೂ ಹೆಚ್ಚಿನ ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂ, ಎಲ್ಲರನ್ನು ಒಳಗೊಂಡ ಮತ್ತು ಕ್ಷಿಪ್ರಗತಿಯ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಧೈರ್ಯವನ್ನು ಕರ್ನಾಟಕ ರಾಜ್ಯ ಹೊಂದಿದೆ. ಈ ಗುರಿಯನ್ನು ಸಾಧಿಸುವಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ನಾವು ಕಂಡುಕೊಂಡಿದ್ದು, ಮುಂಬರುವ ದಿನಗಳಲ್ಲಿ ಪರಿಷ್ಕೃತ ಮಾಹಿತಿ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಲಿದ್ದೇವೆ ಎಂದರು.
ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವತ್ತ ಈ ನೀತಿ ಗಮನ ಕೇಂದ್ರೀಕರಿಸಲಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಬೆಂಬಲಿಸಲು ನನ್ನ ಅಧ್ಯಕ್ಷತೆಯಲ್ಲಿ 'ಕರ್ನಾಟಕ ನವೀನತಾ ಪ್ರಾಧಿಕಾರ' ವನ್ನು ಸ್ಥಾಪಿಸಲಿದ್ದೇವೆ. ಡಿಸಿಎಂ ಅಶ್ವಥ್ನಾರಾಯಣ್ ಇದರ ಉಪಾಧ್ಯಕ್ಷರಾಗಿರಲಿದ್ದಾರೆ. ಸ್ಟಾರ್ಟ್ ಅಪ್ ಗಳಿಗಾಗಿ ವಿಷನ್ ಗ್ರೂಪ್ ಒಂದನ್ನು ಅವರು ರಚಿಸಲಿದ್ದು, ಇದು ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳ ಪ್ರಮುಖ ಪಾಲುದಾರರನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.