ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ. ಸೆ.17ರಂದು ಸಿಎಂ ಬಿಎಸ್ ವೈ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಸಹಜವಾಗಿ ಸಚಿವ ಆಕಾಂಕ್ಷಿಗಳ ಕುತೂಹಲವನ್ನು ಹೆಚ್ಚಿಸಿದೆ.
ಪ್ರವಾಸದ ವೇಳೆ ಸಿಎಂ ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆಯ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯನ್ನು ಕೊಂಡೊಯ್ಯಲಿರುವ ಸಿಎಂ, ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲಿದ್ದಾರೆ. ಸಿಎಂ ಪಟ್ಟಿಯಲ್ಲಿ ವಲಸಿಗ ಮೂವರು ಎಂಎಲ್‌ಸಿಗಳ ಹೆಸರಿನ ಜೊತೆಗೆ ಇಬ್ಬರು ಪಕ್ಷದ ಮೂಲ ಆಕಾಂಕ್ಷಿ ಶಾಸಕರ ಹೆಸರುಗಳಿವೆ ಎನ್ನಲಾಗಿದೆ.
ಇದರ ಜೊತೆಗೆ ಮಳೆ ಹಾನಿ ಕುರಿತು ಹೆಚ್ಚಿನ ಪರಿಹಾರಕ್ಕಾಗಿ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ಸೇರಿ ಕೆಲ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.
ಸಿಎಂ ಒಟ್ಟು ಮೂರು ದಿವಸ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಇದರೊಂದಿಗೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ. ಸಿಎಂ ಜೊತೆ ಪುತ್ರ ಬಿ.ವೈ. ವಿಜಯೇಂದ್ರ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.