ಬೆಂಗಳೂರು: ವಿಶ್ವ ಮತಯಾಚನೆಗೆ ಸಿಎಂ ಕುಮಾರಸ್ವಾಮಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರು. ಅವರು ವಿಶ್ವಾಸ ಮತಯಾಚನೆಯಿಂದ ಹಿಂದೆ ಸರಿಯಲ್ಲ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ನಗರದ ತಾಜ್ ವಿವಾಂತಾ ಹೋಟೆಲ್‍ನಲ್ಲಿ ಮಾತನಾಡಿದ ಅವರು, ಮಾತನಾಡುವುದು ಶಾಸಕರ ಮೂಲಭೂತ ಹಕ್ಕು. ಪ್ರತಿಪಕ್ಷದವರು ಮಾತನಾಡದೆ ಮೌನವಾಗಿರುವುದು ಹೊಣೆಗೇಡಿತನ. ಆದಷ್ಟು ಬೇಗ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಪಾಲರನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ. ರಾಜ್ಯಪಾಲರು ಪತ್ರ ಕಳುಹಿಸಬಾರದಿತ್ತು. ನನಗೆ ನಾಳೆ ಕಲಾಪದಲ್ಲಿ ಮಾತನಾಡುವ ಅವಕಾಶ ಸಿಕ್ಕರೆ, ಅತೃಪ್ತರ ಬಗ್ಗೆ ಮಾತನಾಡುತ್ತೇನೆ. ಹೃದಯ ಸಂಬಂಧಿ ವಿಭಾಗ ಇಲ್ಲದಿದ್ದರೂ ಮುಂಬೈನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಶ್ರೀಮಂತ ಪಾಟೀಲ್ರಿಗೆ ಹೃದಯ ಕಾಯಿಲೆ ಇರುವುದೇ ಅನುಮಾನ. ಬಿಜೆಪಿಯಲ್ಲಿ ದುರುದ್ದೇಶವಿದೆ ಎಂದು ಕಿಡಿಕಾರಿದರು.
ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿ ತೆಪ್ಪಗೆ ಕುಳಿತಿದೆ. ಸರ್ಕಾರದ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ನಾಳೆ ಸಾಯಂಕಾಲದ ವೇಳಗೆ ವಿಶ್ವಾಸ ಮತಯಾಚನೆ ಮಾಡುತ್ತೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ. ರಾಜ್ಯಪಾಲರು 3 ಪತ್ರ ಬರೆದಿದ್ದಾರೆ. ಇದಕ್ಕೆ ಯಾವ ನಿಯಮದಡಿ ಅವಕಾಶ ಇದೆ. ನಿಯಮ, ಕಾನೂನು, ಸಂವಿಧಾನಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನ ಮೊಟಕುಗೊಳಿಸಲು ಸ್ಪೀಕರ್ಗೂ ಅಧಿಕಾರವಿಲ್ಲ ಎಂದರು.