ಬೆಂಗಳೂರು: ಚುನಾವಣೆಗೆ ಐದು ತಿಂಗಳು ಮಾತ್ರ ಬಾಕಿ ಇದೆ. ಆದರೆ ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಇನ್ನು ಕಾಲ ಕೂಡಿಬಂದಿಲ್ಲ, ಅಧಿಕಾರ ಸ್ವೀಕಾರ ಮಾಡಿದಂದಿನಿಂದಲೇ ದೆಹಲಿಗೆ ದಂಡಯಾತ್ರೆ ಮಾಡುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ವಿಸ್ತರಣೆ ಭಾಗ್ಯ ಸಿಕ್ಕಿಲ್ಲ. ಇಂದು ಮತ್ತೆ ಸಿಎಂ ದೆಹಲಿ ವಿಮಾನ ಏರುತ್ತಿದ್ದಾರೆ. ವರಿಷ್ಠರ ಭೇಟಿಗೂ ಮುಂದಾಗಿದ್ದಾರೆ. ಆದರೆ ಸಂಪುಟ ವಿಸ್ತರಣೆಗೆ ಅನುಮತಿ ಸಿಗುತ್ತಾ? ವರಿಷ್ಠರ ಮನದಲ್ಲಿ ಏನಿದೆ ಎನ್ನುವುದು ಮಾತ್ರ ನಿಗೂಢವಾಗಿದೆ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಒಂದೂವರೆ ವರ್ಷವಾಗುತ್ತ ಬಂದಿದೆ. 10ಕ್ಕೂ ಹೆಚ್ಚು ಬಾರಿ ದೆಹಲಿ ಪ್ರವಾಸವನ್ನೂ ಬೊಮ್ಮಾಯಿ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸುವ ಅವಕಾಶ ಸಿಕ್ಕರೂ, ಇವರೆಲ್ಲಾ ಕರ್ನಾಟಕಕ್ಕೆ ಬಂದು ಮಾತುಕತೆಗೆ ಸಿಕ್ಕರೂ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯದಲ್ಲಿ ಯಶಸ್ಸು ಕಾಣಲು ಮಾತ್ರ ಸಿಎಂಗೆ ಸಾಧ್ಯವಾಗಿಲ್ಲ.
ಪಂಚ ರಾಜ್ಯ ಚುನಾವಣೆ, ಸಂಕ್ರಾಂತಿ, ಯುಗಾದಿ, ದಸರಾ, ದೀಪಾವಳಿ ಹೀಗೆ ಒಂದಿಲ್ಲೊಂದು ವಿಷಯವನ್ನು ಮುಂದಿಟ್ಟು ಸಚಿವ ಸಂಪುಟ ವಿಸ್ತರಣೆಯನ್ನು ವರಿಷ್ಠರು ಮುಂದಕ್ಕೆ ಹಾಕುತ್ತಲೇ ಬಂದಿದ್ದಾರೆ. ಇದೀಗ ಗುಜರಾತ್ ಚುನಾವಣೆ ಕಾರಣವನ್ನು ಮುಂದಿಟ್ಟು ಸಂಪುಟ ವಿಸ್ತರಣೆ ವಿಷಯವನ್ನು ಮತ್ತೆ ಮುಂದೂಡಿಕೆ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಮಗೆ ಈ ಬಾರಿ ಅವಕಾಶ ಸಿಗಲಿದೆ ಎಂದು ಕಾತರದಿಂದ ಕಾಯುತ್ತಲೇ ಬಂದಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹಲವರು ಈಗಾಗಲೇ ಸಚಿವ ಸ್ಥಾನದ ಮೇಲಿನ ಆಸೆಯನ್ನೇ ಕೈಬಿಟ್ಟಿದ್ದಾರೆ.
ಈಗ ಸಿಕ್ಕರೂ ಕಡಿಮೆ ಸಮಯದಲ್ಲಿ ಇಲಾಖೆಯಲ್ಲಿ ಏನು ಕೆಲಸ ಮಾಡಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಸಿಕ್ಕ ಅವಕಾಶ ಯಾಕೆ ಬಿಡಬೇಕು ಎಂದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಗುಜರಾತ್ ಚುನಾವಣೆ ಮುಗಿಯಲಿ ಎಂದು ವರಿಷ್ಠರು ಕಳಿಸಿದ ಸಂದೇಶದಿಂದಾಗಿ ಆಕಾಂಕ್ಷಿಗಳು ಮತ್ತೆ ನಿರಾಶರಾಗಿದ್ದಾರೆ ಎನ್ನಲಾಗ್ತಿದೆ. ಇರುವ ಸರ್ಕಾರದ ಅಲ್ಪ ಅವಧಿಯಲ್ಲಿ ಸಂಪುಟ ವಿಸ್ತರಣೆ ಆಗಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಆದರೆ, ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಸಂಪುಟ ವಿಸ್ತರಣೆ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ದೆಹಲಿಗೆ ಹೊರಟಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಕನಸು ಗರಿಗೆದರಿದೆ. ಶಿವಮೊಗ್ಗದಲ್ಲಿ ನಡೆದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ನೀಡಿದ್ದರು.
ಗುಜರಾತ್ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದಾರೆ. ಹಾಗಾಗಿ ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದರು. ಈ ಹೇಳಿಕೆ ನೀಡಿದ ಎರಡು ದಿನದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೊರಟು ನಿಂತಿದ್ದಾರೆ. ವಿಶೇಷವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿಗೆ ಸಮಯಾವಕಾಶ ಕೋರಿದ್ದಾರೆ. ಹಾಗಾಗಿ ಸಿಎಂ ದೆಹಲಿ ಭೇಟಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕುತೂಹಲ ಮೂಡುವಂತೆ ಮಾಡಿದೆ.
ರೇಸ್ನಲ್ಲಿ ಯಾರೆಲ್ಲ ಇದ್ದಾರೆ.. 40 ಪರ್ಸೆಂಟ್ ಕಮೀಷನ್ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ಸಿಡಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಸಂಪುಟ ಮರು ಸೇರ್ಪಡೆಗೆ ಕಾತರದಿಂದ ಇದ್ದಾರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ರೇಸ್ ನಲ್ಲಿರುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕುಡುಚಿ ಶಾಸಕ ಪಿ ರಾಜೀವ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸುರಪುರ ಶಾಸಕ ರಾಜೂಗೌಡ, ಎಂಎಲ್ಸಿ ಸಿಪಿ ಯೋಗೇಶ್ವರ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೂ ಚಾಲ್ತಿಯಲ್ಲಿದೆ.
ಆದರೆ ಇವರಲ್ಲಿ ಹಲವರು ಸಚಿವ ಸ್ಥಾನದ ಆಸೆ ಕೈಬಿಟ್ಟು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸಂಪುಟ ವಿಸ್ತರಣೆಯಾದಲ್ಲಿ ನಾಲ್ಕೈದು ಜನರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಪುನಾರಚನೆಯಾದಲ್ಲಿ ಕೆಲವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಹಿರಿಯ ಸಚಿವ ಸಿ ಸಿ ಪಾಟೀಲ್, ಪ್ರಭು ಚೌಹಾಣ್, ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆಯಿದೆ.
ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಿ ಸಿ ಪಾಟೀಲ್ ಅವರನ್ನು ಕೈಬಿಡಬಹುದು, ಪೂರ್ಣಿಮಾಗೆ ಅವಕಾಶ ಕಲ್ಪಿಸಲು ನಿರ್ಧರಿಸಿದರೆ, ಶಶಿಕಲಾ ಜೊಲ್ಲೆ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆದರೆ ಇದೆಲ್ಲವೂ ಹೈಕಮಾಂಡ್ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬನೆಯಾಗಿದೆ.
ಸದ್ಯ ಗಡಿ ವ್ಯಾಜ್ಯದ ಉದ್ದೇಶದಿಂದ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಈ ಭೇಟಿಯಲ್ಲೇ ವರಿಷ್ಠರ ಭೇಟಿಗೂ ಮುಂದಾಗಿದ್ದಾರೆ. ಆದರೆ ಈವರೆಗೆ ಸಿಎಂ ನಡೆಸಿದ ದೆಹಲಿ ದಂಡಯಾತ್ರೆಯ ಮುಂದುವರೆದ ಭಾಗವಾಗಲಿದೆಯಾ? ಹತ್ತರ ಜೊತೆ ಹನ್ನೊಂದನೇ ಭೇಟಿಯಾಗಲಿದೆಯಾ ಅಥವಾ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗಲಿದೆಯಾ ಎನ್ನುವುದನ್ನು ನೋಡಬೇಕಿದೆ.
ಇದನ್ನೂ ಓದಿ: 'ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಫೈಟರ್ ರವಿ ಬಿಜೆಪಿ ಸೇರಿದ್ದು ತಪ್ಪಲ್ಲ'