ಬೆಂಗಳೂರು: ಕೊರೊನಾ ಕರ್ಫ್ಯೂ ನಡುವೆ ಜಿಲ್ಲೆಗಳಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಎಲ್ಲ ಜಿಲ್ಲಾಡಳಿತಗಳ ಜೊತೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಿದ್ದು, ಕೋವಿಡ್ ಸ್ಥಿತಿಗತಿ ಕುರಿತು ಅವಲೋಕನ ನಡೆಸಲಿದ್ದಾರೆ.
ಬೆಳಗ್ಗೆ 10 ಗಂಟಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಕೋವಿಡ್-19 ಕುರಿತು ಸಭೆ ನಡೆಸಲಿದ್ದಾರೆ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಕರೆಸಿಕೊಂಡು ಕೊರೊನಾ ನಿಯಂತ್ರಣ ಕುರಿತು ಕೈಗೊಂಡ ಕ್ರಮ, ಕೋವಿಡ್ ಕರ್ಫ್ಯೂ ಅನುಷ್ಠಾನ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ಜನ್,ಸರ್ಕಾರಿ ವೈದ್ಯಕೀಯ ಕಾಲೇಜುಗಳ ಡೀನ್ ಗಳು ಮತ್ತು ನಿರ್ದೇಶಕರ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಿದ್ದಾರೆ.
ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಪತ್ತೆ, ಬೆಡ್ ಸೌಲಭ್ಯ, ಆಮ್ಲಜನಕ, ರೆಮ್ಡೆಸಿವಿರ್ ಔಷಧ ದಾಸ್ತಾನು, ಕೋವಿಡ್ ಲಸಿಕೆ ಲಭ್ಯತೆ ಮತ್ತು ಕೊರೊನಾ ಕರ್ಫ್ಯೂ ಅನುಷ್ಠಾನ ಕುರಿತು ಚರ್ಚೆ ನಡೆಸಲಿದ್ದಾರೆ. ಕೋವಿಡ್ ಎರಡನೇ ಅಲೆಯ ಚೈನ್ ಲಿಂಕ್ ಕತ್ತರಿಸಲು ಕಠಿಣ ಕರ್ಫ್ಯೂ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿ ಜಾರಿ ನಂತರದ ಬೆಳವಣಿಗೆಗಳ ಕುರಿತು ಜಿಲ್ಲಾಡಳಿತಗಳ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.