ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡುವರು. ಇಂದು ಸಂಜೆ 6 ಗಂಟೆ ಸುಮಾರಿಗೆ ಪರಿಷೆಯ ಸಂಭ್ರಮ ಆರಂಭವಾಗಲಿದ್ದು, ಸತತ ಮೂರು ದಿನಗಳ ಕಾಲ ಜರುಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ದೊಡ್ಡ ಗಣಪತಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯ್ ಪುರ, ಪೆಂಡಾಲ್, ಆಸನಗಳು, ಗಣ್ಯ ವ್ಯಕ್ತಿಗಳು ಹಾಗು ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಎ.ಪಿ.ಎಸ್ ಕಾಲೇಜ್ ಆಟದ ಮೈದಾನ ಮತ್ತು ಕೊಹಿನೂರು ಆಟದ ಮೈದಾನ ಆಶ್ರಮ ವೃತ್ತದಲ್ಲಿ ಕಲ್ಪಿಸಲಾಗಿದೆ. ಭಕ್ತರಿಗೆ ದೇವರ ದರ್ಶನ ಪಡೆಯಲು ಹಲವೆಡೆ ಎಲ್.ಇ.ಡಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಅಹಿತಕರ ಚಟುವಟಿಕೆಗಳನ್ನು ನಿಯಂತ್ರಿಸಲು ಹಲವು ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಕ್ತರಿಗೆ ಮಾರ್ಗದರ್ಶನ ನೀಡಲು ಹೋಂ ಗಾರ್ಡ್ಸ್, ಪೊಲೀಸ್ ಇಲಾಖೆ ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲಾಗುವುದು. ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ತಾತ್ಕಾಲಿಕ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವ್ಯಾಪಾರಸ್ಥರಿಗೆ ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಪಾದಚಾರಿ ಬದಿಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲದೆ ಅನುಕೂಲ ಕಲ್ಪಿಸಲಾಗಿದೆ. ಸುಮಾರು 1 ಕಿ.ಮೀ ಸರಹದ್ದು ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.
ಅಗ್ನಿಶಾಮಕ ವಾಹನ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯುತ್ ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಬೆಸ್ಕಾಂ ಇಲಾಖೆಯಿಂದ ವ್ಯವಸ್ಥೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವತಿಯಿಂದ ಸುಮಾರು 500 ರಿಂದ 600 ಸಿಬ್ಬಂದಿ ಇದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಸಂಜೆ 6 ರಿಂದ 7.30ರವರೆಗೆ ಶ್ರೀಧರ್ ಸಾಗರ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಸೋಮವಾರ ಸಂಜೆ 6 ರಿಂದ 7.30ರವರೆಗೆ ರಂಗಲಕ್ಷ್ಮೀ ಶ್ರೀನಿವಾಸ್ ತಂಡದಿಂದ ಬೀದಿ ನಾಟಕವಿದೆ. ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಂಜೆ 6 ರಿಂದ 7.30ರವರೆಗೆ ವೀಣಾ ಮುರಳೀಧರ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 22 ರಂದು ವಿಜಯ ವಿಠ್ಠಲ ಶಾಲೆಯ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಲಿದೆ ಎಂದು ಜಯರಾಮ್ ರಾಯ್ ಪುರ ಮಾಹಿತಿ ಕೊಟ್ಟರು.
ಮತ್ತೆ ನಡೆಯುತ್ತಿದೆ ತೆಪ್ಪೋತ್ಸವ: ದಶಕದ ಬಳಿಕ ಬಸವನಗುಡಿ ಪರಿಷೆಯಲ್ಲಿ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಇದು ಪರಿಷೆಯ ಮುಖ್ಯ ಆಕರ್ಷಣೆಯಾಗಲಿದೆ. 2008ರಲ್ಲಿ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆದಿತ್ತು. ಆದಾದ ಬಳಿಕ ನಾನಾ ಕಾರಣಗಳಿಂದ ತೆಪ್ಪೋತ್ಸವ ನಡೆಸಿರಲಿಲ್ಲ.
ಬಸವನಗುಡಿ ಪರಿಷೆಯ ಇತಿಹಾಸ: 1537 ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದ್ದರು. ಈ ದೇವಾಲಯವನ್ನು ಸದ್ಯ ಬುಲ್ ಟೆಂಪಲ್ ಎಂದು ಕರೆಯಲಾಗುತ್ತಿದೆ. 1537ಕ್ಕೂ ಹಿಂದೆ ಸ್ವರ್ಗದಿಂದ ನಂದಿ ಬಂದು ದೇವಸ್ಥಾನದ ಸುತ್ತಮುತ್ತಲು ರೈತರು ಬೆಳೆಯುತ್ತಿದ್ದ ಬೆಳೆಯನ್ನು ತಿಂದು ಹೋಗುತ್ತಿತ್ತು. ಹೀಗಾಗಿ, ಬೆಟ್ಟದ ಮೇಲೆ ದೊಡ್ಡ ಬಸವಣ್ಣನ ದೇವಾಲಯ ಸ್ಥಾಪಿಸಿ ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನು ನಂದಿಗೆ ಅರ್ಪಿಸಲು ಶುರುಮಾಡಿದರು ಎನ್ನುವುದು ಪ್ರತೀತಿ. ಅಂದಿನಿಂದ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಈ ಸಂಪ್ರದಾಯ ಇಂದಿಗೂ ಮುಂದುವರೆಯುತ್ತಿದೆ.
ಇದನ್ನೂ ಓದಿ: ಕಾಡುಮಲ್ಲೇಶ್ವರ ಸ್ವಾಮಿಯ ಕಡಲೆಕಾಯಿ ಪರಿಷೆಗೆ ಚಾಲನೆ