ಬೆಂಗಳೂರು: ಸ್ವಿಟ್ಜರ್ಲೆಂಡ್ ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯ ಎರಡನೇ ದಿನವಾದ ಇಂದು, ವಿವಿಧ ಕಂಪನಿಗಳ ಸಿಇಒಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಬಂಡವಾಳ ತೊಡಗಿಸುವಂತೆ ನೇರ ಆಹ್ವಾನ ನೀಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ದಾವೋಸ್ನ ಕರ್ನಾಟಕ ಪೆವಿಲಿಯನ್ನಲ್ಲಿ ದಸ್ಸಾ ಸಿಸ್ಟಂನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಫ್ಲಾರೆನ್ಸ್ ವರ್ಜಿನ್ ಅವರನ್ನ ಭೇಟಿ ಮಾಡಿ ಚರ್ಚಿಸಿದರು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಐ.ಟಿ/ ಬಿ.ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಸಮ್ಮುಖದಲ್ಲಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿ, ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.
ದಾವೋಸ್ನಲ್ಲಿ ಸಿಐಐ ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಅರ್ಸೆಲರ್ ಮಿತ್ತಲ್ ಸಂಸ್ಥೆಯ ಸಿ.ಇ. ಒ. ಲಕ್ಷ್ಮಿ ಮಿತ್ತಲ್ ಅವರೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅನೌಪಚಾರಿಕ ಚರ್ಚೆ ನಡೆಸಿದರು. ರಾಜ್ಯದಲ್ಲಿನ ಉದ್ಯಮ ಸ್ನೇಹಿ ವಾತಾವರಣ, ಮೂಲಸೌಕರ್ಯ ಇತ್ಯಾದಿಗಳನ್ನು ವಿವರಿಸಿ ಹೂಡಿಕೆಗೆ ಆಹ್ವಾನ ನೀಡಿದರು.
ಈ ನಡುವೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಇಂದು ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಕರ್ನಾಟಕ ಪೆವಿಲಿಯನ್ಗೆ ಆಗಮಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.