ಬೆಂಗಳೂರು : ಸಾಮಾಜಿಕ ನ್ಯಾಯ ಎಂದು ಹೇಳಿ ಹೇಳಿ ದುರುಪಯೋಗವಾಗಿದೆ. ಹೀಗಾಗಿ, ಇನ್ನುಮುಂದೆ ನಮ್ಮ ನ್ಯಾಯ ನಾವು ಪಡೆಯುತ್ತೇವೆ ಎನ್ನಬೇಕು. ಸಾಮಾಜಿಕ ನ್ಯಾಯ ಅಲ್ಲ, ಸಮಾನ ನ್ಯಾಯ ಕೊಡಬೇಕು ಎಂದು ಕೇಳಬೇಕು ಅಂತಾ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ಬಿಜೆಪಿಯ ಹಿಂದುಳಿದ ವರ್ಗಗಳ ಸಚಿವರು, ಸಂಸದರು, ಶಾಸಕರಿಗೆ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವ ಕೆ ಎಸ್ ಈಶ್ವರಪ್ಪ, ಸುನಿಲ್‌ಕುಮಾರ್, ಸಂಸದ ಪಿಸಿ ಮೋಹನ್, ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರಾಧ್ಯಕ್ಷ ಲಕ್ಷ್ಮಣ್, ರಾಜ್ಯಾಧ್ಯಕ್ಷ ನೆ ಲ ನರೇಂದ್ರ ಬಾಬು ಸೇರಿ ಹಲವರು ಭಾಗಿಯಾಗಿದ್ದರು.
ಹಿಂದುಳಿದ ವರ್ಗದ 28 ಮಂದಿಗೆ ಸಚಿವ ಸ್ಥಾನ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ನೆ ಲ ನರೇಂದ್ರಬಾಬು ಮಾತನಾಡಿ, ಭಾರತದ ಸಂವಿಧಾನಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರು ಹಿಂದುಳಿದ ವರ್ಗ, ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಹೊಂದಿದ್ದರು. ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿರವರು ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ 28 ಮಂದಿಗೆ ಸಚಿವ ಸ್ಥಾನ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿರವರು ಮತ್ತು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಆಡಳಿತದಲ್ಲಿ ಹಿಂದುಳಿದ ವರ್ಗದವರಿಗೆ ಹೊಸ ಆಶಾಭಾವನೆ ಮೂಡಿದೆ ಎಂದು ಹೇಳಿದರು.
ನಾವು ಪಿಕ್‌ನಿಕ್‌ಗೆ ಬಂದಿಲ್ಲ : ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮದಿಂದ ಹೊರಡುತ್ತಿದ್ದಂತೆ ಕಾರ್ಯಕರ್ತರು ಹೊರಗೆ ಹೋಗಲು ಆರಂಭಿಸಿದರು. ವೇದಿಕೆಯಿಂದ ಸಿಎಂ ಕೆಳಗಿಳಿಯುತ್ತಿದ್ದಂತೆ ಕಾರ್ಯಕರ್ತರು ಸಹ ಹೊರ ಹೋಗುತ್ತಿದ್ದಂತೆ ಆಕ್ರೋಶಗೊಂಡ ಸಚಿವ ಕೆ ಎಸ್ ಈಶ್ವರಪ್ಪ, ಇದು ಹಿಂದುಳಿದ ವರ್ಗದ ಕಾರ್ಯಕ್ರಮ. ಹಿರಿಯ ನಾಯಕರು ಮಾರ್ಗದರ್ಶನ ಮಾಡಲು ಇಲ್ಲಿ ಬಂದಿದ್ದಾರೆ. ಅವರ ಮಾತೂ ಕೇಳಬೇಕು, ಯಾರೂ ಹೊರಹೋಗಬಾರದು. ಇಲ್ಲಿ ನಾವೆಲ್ಲರೂ ಪಿಕ್‌ನಿಕ್‌ಗೆ ಬಂದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಹಿಂದುಳಿದ ವರ್ಗಗಳು ಒಂದಾಗಿರಬೇಕು ಎನ್ನುವ ಯೋಚನೆಗೆ ಈ ಕಾರ್ಯಕ್ರಮ ಪೂರಕವಾಗಿದೆ. ಇಷ್ಟು ವರ್ಷ ಹಿಂದುಳಿದ ವರ್ಗಗಳು ಅನುಭವಿಸಿದ ನೋವು, ಯಾತನೆ, ಗುರುತಿಸಿರದ ವರ್ಗ ಇದು.
ಮನುಷ್ಯನೊಬ್ಬನ ಅಸ್ತಿತ್ವ ಗುರುತಿಸದೇ ಹೋದರೆ ಅದು ದೊಡ್ಡ ನೋವು, ಅಪಮಾನ. ಸ್ವತಂತ್ರ ಪೂರ್ವದಲ್ಲಿ ಈ ವರ್ಗ ಸಂಘಟನೆ ಆಗಿದೆ. ಸ್ವತಂತ್ರ ಹೋರಾಟದಲ್ಲೂ ಹಿಂದುಳಿದ ವರ್ಗಗಳ ಕೊಡುಗೆ ಬಹಳ ಇದೆ. ದೇಶದ ದೊಡ್ಡ ನಾಯಕರೆಲ್ಲಾ ಹಿಂದುಳಿದ ವರ್ಗದ ನಾಯಕರು. ನಿತೀಶ್ ಕುಮಾರ್, ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ ಹಿಂದುಳಿದ ಸಮುದಾಯದವರು.
ನರೇಂದ್ರ ಮೋದಿ ಕೇವಲ ಹಿಂದುಳಿದ ವರ್ಗದವರು ಎನ್ನುವ ಕಾರಣಕ್ಕೆ ಮಾತ್ರ ಪಿಎಂ ಆಗಿದ್ದಲ್ಲ. ಇನ್ನೊಬ್ಬ ಹಿಂದುಳಿದ ನಾಯಕ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಮೋದಿಯವರಿಗೆ ಬೆಂಬಲ ನೀಡಿದ್ದಾರೆ. ಈ ನಮ್ಮ ಹಿಂದುಳಿದ ಮೋರ್ಚಾ ಇನ್ನು ಬಲಗೊಂಡಾಗ ಪಕ್ಷಕ್ಕೆ ಮತ್ತು ಹಿಂದುಳಿದ ವರ್ಗಕ್ಕೆ ಒಳ್ಳೆಯದಾಗುತ್ತೆ ಎಂದರು.
ನಿಮಗೆ ನ್ಯಾಯ ಕೊಡುವವರಿಗೆ ಶಕ್ತಿ ನೀಡಿ : ಇನ್ನು, ಮೊದಲು ಸಿದ್ದರಾಮಯ್ಯ ಹಿಂದುಳಿದವರು ನಮ್ಮ ಬಿಟ್ಟು ಎಲ್ಲಿಗೆ ಹೋಗ್ತಾರೆ ಎಂದು ಭಾವಿಸಿದ್ರು. ಆದರೆ, ಸಿದ್ಧರಾಮಯ್ಯ Taken for granted ಎನ್ನುವ ರೀತಿ ನಡೆದುಕೊಂಡ್ರು. ಮೋದಿಯವರು ಬಂದು ಆ ಸಾಮಾಜಿಕ ಸಮಾನತೆ ತಂದ್ರು. ಕಾಂಗ್ರೆಸ್‌ನವರು ಹೇಗೆ ಅಂದ್ರೆ ಕೈಗೆ ಹಗ್ಗ ಕೊಟ್ಟು, ವೋಟ್ ಪಡೆದು ಹಗ್ಗ ಕೈಬಿಟ್ಟು ಬಿಡ್ತಾರೆ. ನಿಮಗೆ ಯಾರು ನ್ಯಾಯ ಕೊಡ್ತಾರೆ ಅವರಿಗೆ ಶಕ್ತಿ ನೀಡಿ ಎಂದು ಬೊಮ್ಮಾಯಿ ಕರೆ ನೀಡಿದರು.
ಬಿಜೆಪಿಗೆ ಸೇರಿರುವುದು ಪೂರ್ವಜನ್ಮದ ಪುಣ್ಯ: ಸಚಿವ ಮುನಿರತ್ನ ಮಾತನಾಡಿ, ಕಾಂಗ್ರೆಸ್‌ನಲ್ಲಿ ಇದ್ದಷ್ಟು ಸಮಯ ಈ ರೀತಿಯ ಕಾರ್ಯಕ್ರಮ ನಡೆದಿಲ್ಲ. 2023ರಲ್ಲಿ ಮತ್ತೆ ಈ ಸರ್ಕಾರ ರಚನೆ ಆಗುವುದಕ್ಕೆ ಇದು ಮುನ್ಸೂಚನೆ. ಹಿಂದುಳಿದ ವರ್ಗಕ್ಕೂ ಈ ರೀತಿ ಪ್ರಾಧಾನ್ಯತೆ ಕೊಡುವ ಸಂಸ್ಕೃತಿ ಬೇರೆ ಪಕ್ಷಗಳಲ್ಲಿ ಇದು ನಶಿಸಿ ಹೋಗುತ್ತಿದೆ. ಹಿಂದುತ್ವ, ಹಿಂದುಳಿದ ವರ್ಗ ಎಂದು ಕೆಲಸ ಮಾಡುವ ಪಕ್ಷ ಬಿಜೆಪಿಯೊಂದೇ. ಬಿಜೆಪಿಗೆ ಸೇರಿರುವುದು ಪೂರ್ವಜನ್ಮದ ಪುಣ್ಯ, ನನಗೆ ದೊಡ್ಡ ಕುಟುಂಬ ಸಿಕ್ಕ ಹಾಗಿದೆ ಎಂದು ಅಭಿಪ್ರಾಯಪಟ್ಟರು.