ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ನಗರದಲ್ಲಿ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಸಿಎಂ ಆಗಿ ಅಧಿಕಾರವಹಿಸಿಕೊಂಡ ಬಳಿಕ ಇಂದು ಎರಡೂ ಧರ್ಮದ ಧರ್ಮಗುರುಗಳನ್ನು ಸಿದ್ದರಾಮಯ್ಯ ಭೇಟಿಯಾಗಿ, ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಅರೇಬಿಕ್ ಕಾಲೇಜಿಗೆ ಭೇಟಿ ನೀಡಿ ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಮುಖಂಡರ ಜೊತೆ ಮಾತುಕತೆ ನಡೆಸಿದರು. ಸಚಿವರಾದ ಕೆ.ಜೆ. ಜಾರ್ಜ್, ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಸೇರಿದಂತೆ ಪಕ್ಷದ ಹಲವು ಶಾಸಕರು ಹಾಜರಿದ್ದರು. ನಂತರ ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾಡೋ ಅವರನ್ನು ಸಂಜೆ ಭೇಟಿಯಾದರು. ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ಜಮೀರ್ ಅಹ್ಮದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.
ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರನ್ನು ಧರ್ಮಗುರುಗಳು ಭೇಟಿಯಾಗಿ ಕೆಲ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರು. ಅಲ್ಪಸಂಖ್ಯಾತ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಾಮೂಹಿಕವಾಗಿ ಬೆಂಬಲಿಸಿ, ಗೆಲ್ಲಿಸಿದ್ದಾರೆ. ಸಮುದಾಯದ ಪ್ರಗತಿಗೆ ಸರ್ಕಾರದಿಂದ ಹೆಚ್ಚಿನ ಕೊಡುಗೆಯನ್ನು ನಿರೀಕ್ಷಿಸಿದ್ದು, ಸಾಧ್ಯವಾದಷ್ಟು ತ್ವರಿತವಾಗಿ ಘೋಷಿಸುವಂತೆ ಧರ್ಮಗುರುಗಳು ಕೋರಿದ್ದಾರೆ.
ಇದೇ ಜು.3 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜು.7ಕ್ಕೆ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಈ ಸಂದರ್ಭದಲ್ಲಿ ತಮ್ಮ ಸಮುದಾಯಕ್ಕೆ ವಿಶೇಷ ಅನುದಾನ, ಕಾರ್ಯಕ್ರಮಗಳನ್ನು ಘೋಷಿಸುವಂತೆ ಎರಡೂ ಧರ್ಮದ ಮುಖಂಡರು ಮನವಿ ಮಾಡಿದ್ದಾರೆ. ಇಂದು ಧರ್ಮಗುರುಗಳು ಸಹ ಇದೇ ವಿಚಾರವನ್ನು ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ.
2013 ರಿಂದ 2018ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಈ ಎರಡೂ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ ಘೋಷಿಸಿದ್ದರು. ಶಾದಿಭಾಗ್ಯ ನೀಡಿದ್ದರು. ಹಜ್ ಯಾತ್ರೆಗೆ ತೆರಳುವವರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿದ್ದರು. ಈ ಹಿನ್ನೆಲೆ ಈ ಸಾರಿಯೂ ಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರಿಂದ ಹೆಚ್ಚು ಅನುದಾನ ಹಾಗೂ ಕಾರ್ಯಕ್ರಮದ ನಿರೀಕ್ಷೆ ಹೊಂದಿದ್ದು, ಇದೇ ವಿಚಾರವಾಗಿ ಸಿದ್ದರಾಮಯ್ಯ ಜೊತೆ ಧಾರ್ಮಿಕ ಗುರುಗಳು ಚರ್ಚಿಸಿದ್ದಾರೆ.
ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯಗೆ ಮುಸ್ಲಿಂ ಧರ್ಮಗುರುಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆದರೆ ಅದಾದ ಕೆಲ ತಿಂಗಳಲ್ಲೇ ಸರ್ಕಾರ ಬದಲಾದ ಹಿನ್ನೆಲೆ ಅವರ ಬೇಡಿಕೆ ಹಾಗೆಯೇ ಉಳಿದಿತ್ತು. ಇಂದಿನ ಭೇಟಿ ಸಂದರ್ಭದಲ್ಲಿ ಅದನ್ನು ಮತ್ತೆ ನೆನಪಿಸುವ ಕಾರ್ಯವನ್ನು ಸಿಎಂಗೆ ಮಾಡಲಾಯಿತು.
'ವಕ್ಫ್ ಮಂಡಳಿಗೆ ಸಕಾಲಕ್ಕೆ ಚುನಾವಣೆ ನಡೆಸಲು ಹಾಗೂ ಈ ಮೂಲಕ ಮಂಡಳಿ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಮೌಲ್ವಿಗಳ ರಾಜ್ಯ ಮಟ್ಟದ ಸಮಾವೇಶ ನಡೆಸಬೇಕು ಎಂಬ ನಿಯೋಗದ ಭರವಸೆಗೂ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ, ಹಜ್ ಯಾತ್ರಿಕರಿಗೆ ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಷಯದಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆಯಲು ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: Shakti Scheme: ಮೊದಲ ವಾರ 3 ಕೋಟಿಗೂ ಹೆಚ್ಚು ಮಹಿಳೆಯರಿಂದ ಉಚಿತ ಪ್ರಯಾಣ: ಟಿಕೆಟ್ ಮೌಲ್ಯವೆಷ್ಟು ಗೊತ್ತಾ?