ಬೆಂಗಳೂರು: ನಿಗಮ ಮಂಡಳಿಗೆ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರೆಸ್ ಕ್ಲಬ್ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿಗಮ ಮಂಡಳಿಗೆ ಎಂಎಲ್ಎಗಳನ್ನು ಮಾತ್ರ ಮೊದಲ ಹಂತದಲ್ಲಿ ಆಯ್ಕೆ ಮಾಡೋಣ ಅಂದುಕೊಂಡಿದ್ದೆವು. ಈಗ ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು ಅಂತ ಹೇಳಿದ್ದಾರೆ. ಕಾರ್ಯಕರ್ತರ ಪಟ್ಟಿ ಕೂಡ ಮಾಡ್ತಿದ್ದೇವೆ ಎಂದರು.
ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿರಪರಾಧಿಗಳಿಗೆ ಯಾರಿಗೂ ತೊಂದರೆ ಆಗಲು ಬಿಡಲ್ಲ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಶಿಕ್ಷೆ ಆಗುತ್ತೆ?. ತಪ್ಪು ಮಾಡದವರ ವಿರುದ್ಧ ಯಾಕೆ ಕ್ರಮ ಆಗುತ್ತೆ. ಏನೇ ಮಾಡಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಇಲ್ಲದಿದ್ದರೆ ಎನ್ ಜಿಟಿ ಕ್ರಮ ಎದುರಿಸಬೇಕಾಗುತ್ತದೆ. ನಾವ್ಯಾರೂ ಮಧ್ಯಪ್ರವೇಶ ಮಾಡಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನನಗೂ ಮಾಧ್ಯಮಗಳಲ್ಲಿ ಸುದ್ದಿ ನೋಡಿದ ಮೇಲೆ ಗೊತ್ತಾಗಿದೆ. ಎಲ್ಲರಿಗೂ ಭಯ ಇರಬೇಕು ಅಂತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.
ರಾಮ ಮಂದಿರಕ್ಕೆ ವಿರೋಧ ಇಲ್ಲ: ನಾವು ಅಯೋಧ್ಯೆ ವಿರುದ್ಧ ಇಲ್ಲ, ದೇವಸ್ಥಾನ ಕಟ್ಟುವುದಕ್ಕೆ ವಿರುದ್ಧ ಇಲ್ಲ, ರಾಮ ಮಂದಿರಕ್ಕೂ ವಿರೋಧವಿಲ್ಲ. ನಾವೂ ನಮ್ಮ ಹಳ್ಳಿಯಲ್ಲಿ ಭಜನೆ ಮಾಡ್ತಿದ್ದೆವು. ರಾಮ ಮಂದಿರ ಕಟ್ಟಿರುವುದು ಬಹಳ ಸಂತೋಷ ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರು.
ಎಐಸಿಸಿ ನಾಯಕರು ದೆಹಲಿಗೆ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿಚಾರ ಚರ್ಚೆ ಮಾಡ್ತೀವಿ ಅಂದುಕೊಂಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ಹೊಸ ವರ್ಷದ ಶುಭಾಶಯ: ಇದೇ ವೇಳೆ ಸಿಎಂ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಷಯ ಕೋರಿದರು. 2024 ಸುಖ ಶಾಂತಿ ಸಮೃದ್ಧಿ ತರಲಿ ಅಂತ ಬಯಸುತ್ತೇನೆ ಎಂದು ಹಾರೈಸಿದರು.
ಹೊಸ ವರ್ಷಾಚರಣೆ ಬೆಂಗಳೂರಲ್ಲಿ ಬಿಗಿ ಭದ್ರತೆ: ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರು ಸಿದ್ಧವಾಗಿದೆ. ಈ ಬಾರಿ ಮುನ್ನೆಚ್ಚರಿಕೆಯಾಗಿ ಸೂಕ್ತ ಭದ್ರತೆ ವಹಿಸಲು ಬೆಂಗಳೂರು ನಗರ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಮಾರ್ಗಸೂಚಿ ಹೊರಡಿಸಿರುವ ಸಂಚಾರ ಪೊಲೀಸರು ಇಂದು ಬೆಳಗ್ಗೆಯಿಂದಲೇ ನಗರದ ಎಂ.ಜಿ. ರೋಡ್, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾ ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕಾನೂನು ಸುವ್ಯವಸ್ಥೆ, ಸಂಚಾರ ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಎಂ.ಜಿ.ರಸ್ತೆ , ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಬಳಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ಕೋರಮಂಗಲ, ಇಂದಿರಾನಗರ, ಮಹದೇವಪುರ, ವೈಟ್ ಫೀಲ್ಡ್, ಮಾರತ್ತಹಳ್ಳಿ, ನ್ಯೂ ಬಿ.ಇ.ಎಲ್ ರಸ್ತೆಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಇದನ್ನೂಓದಿ:ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನ ಗುರಿ ಲೋಕಸಭಾ ಚುನಾವಣೆ: ಬಿ ವೈ ವಿಜಯೇಂದ್ರ