ನವದೆಹಲಿ/ಬೆಂಗಳೂರು: ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಇಂದು ಸಿಎಂ ಮಾತನಾಡಿ, ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಎಫ್ಸಿಐ ಅಕ್ಕಿ ನೀಡುವ ವಿಚಾರದಲ್ಲಿ ಒಪ್ಪಿಗೆ ಪತ್ರವನ್ನು ನೀಡಿ ಮರುದಿನವೇ ಅಕ್ಕಿ ವಿತರಣೆಯನ್ನು ರಾಜ್ಯಗಳಿಗೆ ಸ್ಥಗಿತಗೊಳಿಸಿರುವ ವಿಚಾರವನ್ನು ಗಮನಕ್ಕೆ ತರಲಾಗಿದೆ ಎಂದರು.
ಅಮಿತ್ ಶಾ ಅವರು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ರಾಜ್ಯಕ್ಕೆ ಎರಡು ಐಆರ್ಪಿ ಬೆಟಾಲಿಯನ್ ಒದಗಿಸಿದ್ದು, ಇನ್ನೆರಡು ಬೆಟಾಲಿಯನ್ ಒದಗಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ನಿನ್ನೆ ಸಂಜೆ ಅಮಿತ್ ಶಾರನ್ನು ಸಿದ್ದರಾಮಯ್ಯ ದಿಲ್ಲಿಯಲ್ಲಿ ಭೇಟಿ ಮಾಡಿದ್ದರು. ಆಹಾರ ಸಚಿವ ಪಿಯುಷ್ ಘೋಯಲ್ ಜೊತೆ ಇಂದು ಸಮಾಲೋಚಿಸುವುದಾಗಿ ಅವರು ಭರವಸೆ ನೀಡಿದ್ದರು. ಅಕ್ಕಿ ನಿರೀಕ್ಷೆಯಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಕೇಂದ್ರದಿಂದ ನಿರಾಸೆ ಆಗುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಮಿತ್ ಶಾ ಕಡೆಯಿಂದ ಬರುವ ಮಾಹಿತಿ ಪಡೆದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ನಡೆಸಿದ ಸಭೆಯಲ್ಲಿ ಸಿಎಂ ಸವಿಸ್ತಾರವಾಗಿ ರಾಜ್ಯದ ಅಗತ್ಯವನ್ನು ವಿವರಿಸಿದ್ದರು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿಯನ್ನು ನೀಡಿರುವ ಭರವಸೆಯನ್ನು ಈಡೇರಿಸುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಕೋರಿ ಎಫ್ಸಿಐಗೆ ಜೂನ್ 9 ರಂದು ಪತ್ರ ಬರೆಯಲಾಗಿತ್ತು. ಎಪ್ಸಿಐ ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯ ಕೋರಿರುವ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ ಎಂದು ಜೂನ್ 12 ರಂದು ಪತ್ರಮುಖೇನ ತಿಳಿಸಿದ್ದರು.
ಎಫ್ಸಿಐನ ಡೆಪ್ಯೂಟಿ ಮ್ಯಾನೇಜರ್ನನ್ನು ಭೇಟಿಯಾಗಿ ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ ಜೂನ್ 13 ರಂದು ಕೇಂದ್ರ ಆಹಾರ ಇಲಾಖೆಯವರು ಎಪ್ಸಿಐ ಗೆ ಪತ್ರ ಬರೆದು ರಾಜ್ಯಗಳಿಗೆ ಕೇಂದ್ರದಿಂದ ಅಕ್ಕಿ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದರು. ನಂತರ ಜೂನ್ 14 ರಂದು ಎಪ್ಸಿಐ ಅಧ್ಯಕ್ಷರು ಪತ್ರ ಬರೆದು, ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಮೊದಲು ಅಕ್ಕಿ ನೀಡುವುದಾಗಿ ಒಪ್ಪಿಕೊಂಡು ನಂತರ ನಿರಾಕರಿಸಿದ್ದು ಸರಿಯಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅಮಿತ್ ಶಾಗೆ ಮನವಿ ಮಾಡಿದ್ದರು. ಯೋಜನೆ ಜಾರಿಗೆ ನಾವು ಶ್ರಮಿಸುತ್ತಿದ್ದೇವೆ. ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಪಡೆಯುವ ಬಗ್ಗೆ ಅನೇಕ ರಾಜ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
ಆದರೆ ಅವರು ಸಂಪೂರ್ಣ 2.28 ಲಕ್ಷ ಮೆ.ಟನ್ ನೀಡಲು ಸಾಧ್ಯವಿಲ್ಲ. ಆಂಧ್ರಪ್ರದೇಶದವರು 42 ರೂ.ಗಳಿಗೆ ಅಕ್ಕಿ ನೀಡುವುದಾಗಿ ತಿಳಿಸಿದ್ದು, ಸಾರಿಗೆ ವೆಚ್ಚ ಅಧಿಕವಾಗಲಿದೆ. ತೆಲಂಗಾಣದವರು ಭತ್ತ ಮಾತ್ರ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಛತ್ತೀಸ್ಗಡ ಮುಖ್ಯಮಂತ್ರಿಗಳು ಒಂದು ತಿಂಗಳಿಗೆ ಮಾತ್ರ 1 ಲಕ್ಷ ಮೆಟ್ರಿಕ್ ಟನ್ ನೀಡುವುದಾಗಿ ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದ ಅಕ್ಕಿ ನೀಡಲು ಒಪ್ಪಿಕೊಂಡರೆ, ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ವಿವರ ಸಲ್ಲಿಸಿದ್ದರು.
ಇದನ್ನೂ ಓದಿ: ಸೌಹಾರ್ದಯುತವಾಗಿ ರಾಷ್ಟ್ರಪತಿ ಭೇಟಿಯಾದ ಸಿದ್ದರಾಮಯ್ಯ.. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಕೇಂದ್ರಕ್ಕೆ ಸಿಎಂ ಪ್ರಸ್ತಾಪ
ಸಕಾರಾತ್ಮಕ ಸ್ಪಂದನೆ: ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ಅಮಿತ್ ಶಾ ಮುಂದೆ ಸಿಎಂ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿ, ಆಹಾರ ಸಚಿವ ಪಿಯುಷ್ ಘೋಯಲ್ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದರು.
ಸಿದ್ದರಾಮಯ್ಯ ಬೆಳಗ್ಗೆ 9.40ಕ್ಕೆ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು, ಮಧ್ಯಾಹ್ನ 12.30ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇಂದು ದಿನವಿಡೀ ಬೇರೆ ಯಾವುದೇ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಹಮ್ಮಿಕೊಂಡಿಲ್ಲ. ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪತ್ನಿಯ ಆರೋಗ್ಯ ವಿಚಾರಿಸಲು ಮಣಿಪಾಲ್ ಆಸ್ಪತ್ರೆಗೆ ತೆರಳುವ ಸಾಧ್ಯತೆ ಇದೆ. ಬಳಿಕ ನಿವಾಸಕ್ಕೆ ಆಗಮಿಸಿ ಸಚಿವರು ಹಾಗೂ ಆಪ್ತ ನಾಯಕರ ಜೊತೆ ಚರ್ಚಿಸಲಿದ್ದಾರೆ.