ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲಾ ಪ್ರವಾಸ ಮುಂದೂಡಿಕೆಯಾಗಿದೆ. ದೇಶಾದ್ಯಂತ ಶೋಕಾಚರಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರ ಬದಲು ಮುಂದಿನ ವಾರ ಭೇಟಿ ನೀಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಳೆ ಹೆಲಿಕಾಪ್ಟರ್ ಮೂಲಕ ಭದ್ರಾ ಜಲಾಶಯಕ್ಕೆ ತೆರಳಿ ಭದ್ರೆಗೆ ಬಾಗಿನ ಅರ್ಪಿಸುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ಮುಂದೂಡಿಕೆಯಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದಿಂದಾಗಿ ಒಂದು ವಾರ ಶೋಕಾಚರಣೆ ಜಾರಿಯಲ್ಲಿರುವ ಕಾರಣ ಸಿಎಂ ತವರು ಜಿಲ್ಲೆಯ ಪ್ರವಾಸವನ್ನು ಮುಂದೂಡಿಕೆ ಮಾಡಿದ್ದಾರೆ.
ಭದ್ರಾ ಜಲಾಶಯ ಭರ್ತಿಗೆ ಇನ್ನೂ ಮೂರು ಅಡಿ ನೀರು ಬರಬೇಕಿದ್ದು, ಜಲಾಶಯದ ಗೇಟ್ಗಳನ್ನು ತೆರೆದಿಲ್ಲ. ಹಾಗಾಗಿ ಸಂಪೂರ್ಣ ಭರ್ತಿಯಾದ ನಂತರವೇ ಬಾಗಿನ ಅರ್ಪಿಸಲು ದಿನಾಂಕ ನಿಗದಿಪಡಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ನಾಳೆ 11 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತೆರಳಿ ಮಧ್ಯಾಹ್ನ 12.15ಕ್ಕೆ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆ ಇತ್ತು. ನಂತರ ಮಧ್ಯಾಹ್ನ 2 ಗಂಟೆಗೆ ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರನ್ನು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರವಾಸ ಮುಂದೂಡಿಕೆಯಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.