ಬೆಂಗಳೂರು: ಕಳೆದ ವರ್ಷದ ಫೈಲ್ ಅನ್ನೇ ಕಾಪಿ ಪೇಸ್ಟ್ ಮಾಡಿಕೊಂಡು ಬಂದಿದ್ದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಕೆಲ ಅಧಿಕಾರಿಗಳು ಹಳೇ ಅಂಕಿಅಂಶವನ್ನು ಕಾಪಿ ಪೇಸ್ಟ್ ಮಾಡಿ ಬಂದಿದ್ದರು. ಇದರಿಂದ ಸಿಟ್ಟಾದ ಸಿಎಂ ಬೊಮ್ಮಾಯಿ ಹಾಗೂ ಸಚಿವ ಮಾಧುಸ್ವಾಮಿ ಅವರು ಸಿಇಒಗಳಿಗೆ ಸಭೆಯಲ್ಲೇ ಚಳಿ ಬಿಡಿಸಿದರು. ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಸಿಇಒಗಳಿಗೆ ಸಿಎಂ ಮತ್ತು ಕಾನೂನು ಸಚಿವರು ಕ್ಲಾಸ್ ತೆಗೆದುಕೊಂಡರು. ರಸ್ತೆ, ಒಳ ಚರಂಡಿ, ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಹಿಂದೆ ಉಳಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ಎಲ್ಲೆಡೆ ಬಂದಿದೆ, ಇದಕ್ಕೆ ನಿಮ್ಮ ಕ್ರಮವೇನು?. ಮೈಸೂರಿನಲ್ಲಿ ಒಬ್ಬನೇ ಗುತ್ತಿಗೆದಾರನಿಗೆ ಬಹುತೇಕ ಕಾಮಗಾರಿ ಟೆಂಡರ್ ಕೊಟ್ಟಿರುವುದು ಹೇಗೆ?. ಬೆಳಗಾವಿ ಸೇರಿ ಕೆಲವು ಜಿಲ್ಲೆಗಳು ಮಾತ್ರ ಯೋಜನೆಗಳ ಪ್ರಗತಿ 90% ರಷ್ಟು ಸಾಧಿಸಿವೆ. ಬಹುತೇಕ ಜಿಲ್ಲೆಗಳಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆ. ನಿಮ್ಮ ಅಕೌಂಟ್ನಲ್ಲಿ ಕೋಟಿ ಕೋಟಿ ಹಣ ಇದ್ದು, ಏನು ಆಗಿದೆ ನಿಮಗೆ. ಜನರ ಸಮಸ್ಯೆಗೆ ಸ್ಪಂದಿಸಲು ಏನು ತೊಡಕಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಸಮಯೋಚಿತ ತೀರ್ಮಾನಗಳಿಂದ ಜನರಿಗೆ ನೆರವಾಗಿ.. ಡಿಸಿಗಳಿಗೆ ಸಿಎಂ ಖಡಕ್ ಸೂಚನೆ