ಬೆಂಗಳೂರು: ಅಧಿವೇಶನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿರುವ ಸ್ಪೀಕರ್ ನಿರ್ಧಾರದ ಕುರಿತು ಸಿಎಂ ಯಡಿಯೂರಪ್ಪ ಮೌನ ಮುಂದುವರೆದಿದೆ. ಆದರೆ, ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಪ್ರವೇಶಕ್ಕೆ ಇದ್ದ ಸಮಸ್ಯೆಯನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಸಿಎಂ, ಸಚಿವರ ಸುದ್ದಿಗೋಷ್ಠಿ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನ ಮಾಧ್ಯಮಗಳು ಬಹಿಷ್ಕಾರಿಸಿದ್ದವು. ಇದರಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ, ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಪತ್ರಕರ್ತರ ಪ್ರವೇಶ ಬಗ್ಗೆ ಮಾತ್ರ ಸ್ಪಂದಿಸಿದ್ದಾರೆ. ವಾರ್ತಾ ಇಲಾಖೆ ಶಿಫಾರಸ್ಸು ಪರಿಗಣಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆ, ವಾಹಿನಿಗಳ ಪ್ರತಿನಿಧಿಗಳಿಗೆ ಈ ಹಿಂದಿನ ರೀತಿಯಲ್ಲಿಯೇ ಪ್ರವೇಶ ರಹದಾರಿ ಪತ್ರಗಳನ್ನು ವಿತರಿಸಲು ಸಿಎಂ ಸೂಚನೆ ನೀಡಿದ್ದಾರೆ.
ಆದರೆ, ಮುಖ್ಯವಾಗಿರುವ ಅಧಿವೇಶನದ ನೇರ ಪ್ರಸಾರ ಕುರಿತು ಸಿಎಂ ಮೌನವಹಿಸಿದ್ದಾರೆ. ಅಧಿವೇಶನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿರೋದು ಸ್ಪೀಕರ್. ಸ್ಪೀಕರ್ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದು, ಸ್ಪೀಕರ್ ನಿರ್ಧಾರದಿಂದ ಯಡಿಯೂರಪ್ಪ ಅಂತರ ಕಾಯ್ದುಕೊಂಡಿದ್ದಾರೆ.