ಬೆಂಗಳೂರು: ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಸಿಗೆಗಳನ್ನು ಬಾಡಿಗೆ ಪಡೆಯುವ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಪಸ್ ಪಡೆದಿದ್ದಾರೆ. ಅದರ ಬದಲು 4.87 ಕೋಟಿ ವೆಚ್ಚದಲ್ಲಿ ಹಾಸಿಗೆ ಸೆಟ್ಗಳನ್ನು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.
ಹಾಸಿಗೆಗಳ ಖರೀದಿ ಬದಲು ಬಾಡಿಗೆ ಪಡೆಯುವ ನಿರ್ಧಾರದ ಹಿಂದೆ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಚಿವರ ವಿರುದ್ಧ ಸಿಎಂ ಗರಂ ಆಗಿದ್ದರು. ಗಮನಕ್ಕೆ ತಾರದೆ ಹಾಸಿಗೆ ಬಾಡಿಗೆ ಪಡೆಯುವ ನಿರ್ಧಾರ ಕೈಗೊಂಡಿದ್ದಕ್ಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸಿಎಂ ಲೋಪದೋಷ ಸರಿಪಡಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಖರೀದಿ ಪ್ರಕ್ರಿಯೆಯ ಸಂಪೂರ್ಣ ವಿವರವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ.
ಸಿಎಂ ಹೇಳಿಕೆ ವಿವರ:
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,000 ಬೆಡ್‍ಗಳ ಸಾಮರ್ಥ್ಯವುಳ್ಳ ಕೋವಿಡ್-19 ಕೇರ್ ಸೆಂಟರ್ಗೆ ಅವಶ್ಯವಿರುವ ವಸ್ತುಗಳನ್ನು ವಿವಿಧ ಸಂಸ್ಥೆಗಳಿಂದ ಪ್ರತಿ ದಿನಕ್ಕೆ ರೂ.800 ದರದಲ್ಲಿ ಬಾಡಿಗೆ ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧಾರ ಮಾಡಿದ್ದರು. ಇದರಿಂದ ಒಂದು ತಿಂಗಳಿಗೆ ಅಂದಾಜು ರೂ. 24.00 ಕೋಟಿ ವೆಚ್ಚವಾಗುವ ಸಂಭವವಿತ್ತು.
ಈ ಬಾಡಿಗೆ ದರವು ದುಬಾರಿ ಇದ್ದುದರಿಂದ ಮತ್ತು ಬಾಡಿಗೆ ದರದಲ್ಲಿಯೇ ಈ ವಸ್ತುಗಳನ್ನು ಖರೀದಿ ಮಾಡಲು ಅವಕಾಶವಿದ್ದುದರಿಂದ, ತದನಂತರ ಈ ವಸ್ತುಗಳನ್ನು ಸರ್ಕಾರದ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ನೀಡುವುದು ಸೂಕ್ತವೆಂದು ಮನಗಂಡು ಅದರಂತೆ ಕ್ರಮ ಜರುಗಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಆ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ಪೂರೈಕೆದಾರರೊಂದಿಗೆ ಸಮಾಲೋಚನೆ ಮಾಡಿ ಪ್ರತಿ ಬೆಡ್‍ಗೆ ಬೇಕಾದ ವಸ್ತುಗಳ ಪೈಕಿ 6 ವಸ್ತುಗಳಾದ ಮಂಚ, ಬೆಡ್, ಫ್ಯಾನ್, ಬಕೇಟ್, ಮಗ್, ಡಸ್ಟ್ಬಿನ್ಗಳನ್ನು ಪ್ರತಿ ಸೆಟ್‍ಗೆ ರೂ.7,500/- ಮೊತ್ತದಲ್ಲಿ ಖರೀದಿ ಮಾಡಲು ತೀರ್ಮಾನಿಸಿರುತ್ತಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಬೆಡ್‍ಗಳಿಗೆ ಬೇಕಾಗಿರುವ ಈ ವಸ್ತುಗಳನ್ನು ರೂ.4.87 ಕೋಟಿ ಮೊತ್ತದಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ.
ನೆಲ ಹಾಸಿಗೆ ಸಲುವಾಗಿ ವಿನೈಲ್ ಫ್ಲೋರಿಂಗ್ನನ್ನು ಪ್ರತಿ ಚದರ ಅಡಿಗೆ ರೂ.31 ರಂತೆ ಖರೀದಿಸಲು ತೀರ್ಮಾನಿಸಿದ್ದು, ಇದರಿಂದ ಒಟ್ಟು 7.9 ಲಕ್ಷ ಚದರ ಅಡಿಗೆ ರೂ.2.45 ಕೋಟಿ ವೆಚ್ಚವಾಗಲಿದೆ.
ಪುನರ್ಬಳಕೆಯಾಗದ 19 ವಸ್ತುಗಳನ್ನು ಪ್ರತಿ ಸೆಟ್‍ಗೆ ಪ್ರತಿ ತಿಂಗಳಿಗೆ ರೂ.6,500/- ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಿರುತ್ತಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಬೆಡ್‍ಗಳಿಗೆ ಈ 19 ವಸ್ತುಗಳನ್ನು ಒಂದು ತಿಂಗಳಿಗೆ ರೂ.4.23 ಕೋಟಿ ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಲಾಗಿದೆ.
ಅಗತ್ಯ ವಸ್ತುಗಳನ್ನು ಬಾಡಿಗೆ ಪಡೆಯುವ ವಿಷಯವು ನನ್ನ ಗಮನಕ್ಕೆ ಬಂದ ನಂತರ ಆದ ಲೋಪದೋಷವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಲು ಮತ್ತು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಲಾಗಿತ್ತು. ನನ್ನ ಸೂಚನೆಯಂತೆ ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ತಕ್ಷಣವೇ ಕ್ರಮ ಕೈಗೊಂಡಿದ್ದರಿಂದ ಈ ವಸ್ತುಗಳನ್ನು ಬಾಡಿಗೆ ಪಡೆಯುವುದರಿಂದ ಆಗುವ ಅನವಶ್ಯಕ ವೆಚ್ಚವಾಗುವುದನ್ನು ತಡೆಯಲಾಗಿದೆ.
ಖರೀದಿ ಮಾಡಿರುವ ವಸ್ತುಗಳ ಒಟ್ಟು ಮೊತ್ತ ರೂ.7.32 ಕೋಟಿಗಳನ್ನು ತಕ್ಷಣವೇ ಪೂರೈಕೆದಾರರಿಗೆ ಪಾವತಿಸುವಂತೆ ಬಿಬಿಎಂಪಿ ಆಯಕ್ತರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.