ಬೆಂಗಳೂರು: ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಣ್ಣ ಕೈಗಾರಿಕಾ ಉದ್ದಿಮೆದಾರರಿಗೆ ಕೆಎಸ್ಎಸ್ಐಡಿಸಿ ವತಿಯಿಂದ ನೆಲಮಂಗಲ ಮತ್ತು ಹರಿಹರ ವಸಾಹತುಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾರಂಭ ನಡೆಯಿತು.
ಸುಮಾರು 15 ರಿಂದ 20 ವರ್ಷಗಳಿಂದ ಕೈಗಾರಿಕಾ ನಿವೇಶನದ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ನೀಡಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ಇಂದು ಎಲ್ಲ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಸಿಎಂ ಯಡಿಯೂರಪ್ಪ ವಿತರಿಸಿದರು. ನೆಲಮಂಗಲದ 255, ಹರಿಹರದ 120 ಎಂಡಿ, ಸಾಗರದ 72 ಹಕ್ಕುದಾರರಿಗೆ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, 7 ಲಕ್ಷ ಸಣ್ಣ ಕೈಗಾರಿಕೆ ಇದ್ದು, ಇದರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಣ್ಣ ಕೈಗಾರಿಕೆಗಳಲ್ಲಿ ಒಂದಿಷ್ಟು ಇಳಿಕೆ ಕಂಡು ಬಂದಿದ್ದು, ಇದು ತಾತ್ಕಾಲಿಕವಷ್ಟೇ ಎಂದರು. ಈ ಹಿಂದೆ ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ಯೋಜನೆ ರೂಪಿಸಿತ್ತು. ಈ ಬಡ್ಡಿ ಮನ್ನಾ ಯೋಜನೆಯ ಜಾರಿ ತಡವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.
2020-23ರ ನೂತನ ಕೈಗಾರಿಕಾ ಕರಡು ಪ್ರತಿ ಸಿದ್ಧಪಡಿಸಲಾಗಿದ್ದು, ಸಣ್ಣ ಕೈಗಾರಿಕಾಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಇನ್ನು ಕೈಗಾರಿಕೆಗಾಗಿ ಭೂ ಖರೀದಿ ವೇಳೆ ರೈತರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರ ಭೂಮಿ ಖರೀದಿಗೆ ಕ್ರಮ ವಹಿಸಲಾಗಿದೆ ಎಂದರು.