ಬೆಂಗಳೂರು: ಪ್ರವಾಹದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನನ್ನ ಅನುಮತಿಗೆ ಕಾಯದೆ ಪರಿಹಾರ ಕಾರ್ಯಾಚರಣೆಗೆ ಮುಂದಾಗುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಸಂಜೆಯ ವೈದ್ಯಕೀಯ ಪರೀಕ್ಷೆ ನಂತರ ಮುಖ್ಯ ಕಾರ್ಯದರ್ಶಿಗಳಿಗೆ ದೂರವಾಣಿ ಕರೆ ಮಾಡಿದ ಸಿಎಂ, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಮಗ್ರವಾದ ಮಾಹಿತಿ ಪಡೆದರು. ಬಳಿಕ ಅಗತ್ಯ ತುರ್ತು ಕ್ರಮಗಳಿಗೆ ನನ್ನ ಒಪ್ಪಿಗೆ ಪಡೆಯಲು ಕಾಯದೆ ಮುಂದುವರೆಯಬಹುದು ಎಂದು ಸೂಚನೆ ನೀಡಿದರು. ಪ್ರವಾಹದ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕು. ಯಾವುದೇ ಕಾರಣಕ್ಕೂ ಪರಿಹಾರ ಕಾರ್ಯಾಚರಣೆಗೆ ತೊಡಕಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ನಂತರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಕರೆ ಮಾಡಿ ಕೊಡಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಇದರ ಜೊತೆಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಅರ್ಚಕರ ಕುಟುಂಬದ ಬಗ್ಗೆಯೂ ಮಾಹಿತಿ ಪಡೆದರು.