ಬೆಂಗಳೂರು: ಪರಿಸ್ಥಿತಿ ಕೈಮೀರುತ್ತಿದ್ದರೂ ಬೆಡ್ಗಳನ್ನು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಖಾಸಗಿ ಮೆಡಿಕಲ್ ಕಾಲೇಜುಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಅಸಮಾಧಾನಗೊಂಡಿದ್ದು, ಕಾಲೇಜುಗಳ ಆಡಳಿತ ಮಂಡಳಿ ಜೊತೆ ನಾಳೆ ಮತ್ತೊಮ್ಮೆ ಸಭೆ ನಡೆಸಿ ಮನವೊಲಿಕೆ ಕಾರ್ಯ ಮಾಡಲಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಬೆಂಗಳೂರು ವಲಯವಾರು ಉಸ್ತುವಾರಿ ಸಚಿವರ ಸಭೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಸರ್ಕಾರಕ್ಕೆ ನೀಡದಿರುವ ಕುರಿತು ಚರ್ಚೆ ನಡೆಯಿತು. ಈಗಾಗಲೇ 5000 ಬೆಡ್ಗಳನ್ನು ಸರ್ಕಾರಕ್ಕೆ ನೀಡುವಂತೆ ಸೂಚನೆ ನೀಡಿದ್ದರೂ, ಸರಿಯಾಗಿ ಪಾಲನೆಯಾಗಿಲ್ಲ. ಬೆಡ್ಗಳನ್ನು ಸರ್ಕಾರಕ್ಕೆ ನೀಡುತ್ತಿಲ್ಲ ಎಂದು ಸಚಿವರು ಸಿಎಂ ಮುಂದೆ ಅಳಲು ತೋಡಿಕೊಂಡರು.
ಈ ಕುರಿತು ಪರಿಶೀಲನೆ ನಡೆಸಿದ ಸಿಎಂ 5000 ಬೆಡ್ಗಳನ್ನು ನೀಡಬೇಕಿದ್ದರೂ, ಕೇವಲ 2500 ಬೆಡ್ಗಳು ಮಾತ್ರ ಈವರೆಗೆ ಲಭ್ಯವಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ಸೂಚನೆಯನ್ನು ಪಾಲನೆ ಮಾಡದಿರುವ ಖಾಸಗಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ಕ್ರಮದಂತಹ ಹೆಜ್ಜೆ ಇಡುವ ಬದಲು ಮತ್ತೊಮ್ಮೆ ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದರೆ ಒಳಿತು ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ನಾಳೆ ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಭೆ ಕರೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟು ಕೊಡಲು ಒಪ್ಪದಿದ್ದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನಾಳೆ ಸಿಎಂ ನೀಡಲಿದ್ದಾರೆ ಎಂದು ತಿಳಿಸಿದರು.