ಬೆಂಗಳೂರು: ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ, ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಪತ್ರ ನೀಡಿಕೆಗೆ ಎದುರಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.
ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಮುಳುಗಡೆ ಸಂತ್ರಸ್ತರೆಂದು ಗುರುತಿಸಲ್ಪಟ್ಟು ಸುಮಾರು 9,773 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಭೂಮಿಯ ಹಕ್ಕನ್ನು ದಾಖಲೆ ಮಾಡುವ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಈ ಸಮೀಕ್ಷೆ ಆಧಾರದಲ್ಲಿ ಸಂತ್ರಸ್ತರಿಗೆ ವೈಯಕ್ತಿಕ ಪಹಣಿ ದಾಖಲಿಸಲು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿಎಸ್ವೈ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್ ಓ ಸಿ ) ನೀಡುವಂತೆ ಕೋರಲಾಗಿದೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೈಸೂರು ಕಾಗದ ಕಾರ್ಖಾನೆಯ ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಮರಗಳನ್ನು ಕಟಾವು ಮಾಡಿ, ಮಾರಾಟ ಮಾಡುವ ಮೂಲಕ ಸಿಬ್ಬಂದಿ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈಗಾಗಲೇ ಪುನರ್ವಸತಿ ತಡವಾಗಿದ್ದು ನಿಗದಿತ ದಿನಾಂಕದ ಒಳಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ನಂತರ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಲಿಂಗನಮಕ್ಕಿ ಜಲಾಶಯ ಕಟ್ಟುವಾಗ ಶರಾವತಿ ಭಾಗ ಮುಳುಗಡೆಯಾಗಿದೆ. ಮುಳುಗಡೆಯಾದ ರೈತರಿಗೆ ಅಭಿವೃದ್ಧಿ ವಿಚಾರದಲ್ಲಿ ಶಾಶ್ವತವಾದ ನೆಲೆ ಸಿಗಬೇಕು. ಆ ಸಂದರ್ಭದಲ್ಲಿ ಪ್ರಾಣಿಗಳಿಗೂ ಮನುಷ್ಯರಿಗೂ ವ್ಯತ್ಯಾಸವಿಲ್ಲದ ರೀತಿಯಲ್ಲಿ ಲಾರಿಯಲ್ಲಿ ತಂದು ಜನರನ್ನು ಮುಳುಗಡೆ ಪ್ರದೇಶದಿಂದ ಬೇರೆ ಕಡೆ ಬಿಟ್ಟುಹೋಗಿದ್ದಾರೆ. ಅಂದಿನಿಂದ ಇಂದಿನವರೆಗೂ ಆ ಜಾಗದಲ್ಲಿ ಅವರೆಲ್ಲ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅವರ ಹೆಸರಿಗೆ ದಾಖಲೆ ಮಾತ್ರ ಬಂದಿಲ್ಲ. ಆ ಕೆಲಸ ಮಾಡಿಕೊಡುವುದು ಸರ್ಕಾರದ ಕರ್ತವ್ಯ, ಅವರಿಗೆ ದಾಖಲೆಗಳನ್ನು ಕೊಡಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ನೆಲೆ ಸಿಕ್ಕಬೇಕು. ಆ ನಿಟ್ಟಿನಲ್ಲಿ ಸೆಟಲ್ಮೆಂಟ್ ಅಧಿಕಾರಿಗಳ ಜೊತೆ ಕಂದಾಯ ಮತ್ತು ಅರಣ್ಯ ಭೂಮಿ ಜಂಟಿ ಸರ್ವೆ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಸಿಎಂ ಸ್ಪಂದಿಸಿದ್ದಾರೆ ಎಂದರು.
ಅರಣ್ಯ ಹಕ್ಕು ಕಾಯ್ದೆಯಡಿ ಎಸ್ಟಿಗಳಿಗೆ ಐದು ವರ್ಷದ ದಾಖಲೆಬೇಕು. ಇತರ ಸಮುದಾಯದವರಿಗೆ ಮೂರು ತಲೆಮಾರಿನ ದಾಖಲೆಗಳು ಬೇಕು. ದಾಖಲೆಗಳನ್ನು ಒದಗಿಸಿದರೂ ನಮ್ಮ ಅಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಲು ಸಿದ್ದರಿಲ್ಲ. ಈ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗಿದೆ. ಮೂರು ತಲೆಮಾರಿನ ದಾಖಲೆಗಳನ್ನು, ಇತಿಹಾಸಗಳನ್ನು ಅಧ್ಯಯನ ಮಾಡಿ ಆದಷ್ಟು ಬೇಗ ರೈತರ ಸಮಸ್ಯೆ ಪರಿಹಾರ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಏನೇ ಕಾನೂನು ಸಮಸ್ಯೆಗಳು ಇದ್ದರೂ ಒಟ್ಟಾಗಿ ಪರಿಹರಿಸಿ ರೈತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದ್ದು, ಆದಷ್ಟು ಬೇಗ ಸಮಸ್ಯೆಗಳು ಪರಿಹಾರಗೊಳ್ಳುವ ವಿಶ್ವಾಸ ಇದೆ ಎಂದರು.
ಸಭೆಯಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.