ಬೆಂಗಳೂರು: ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆಗೆ ಇಂದು ಡಿ.ಬಿ.ಟಿ ಮೂಲಕ ಹಣ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಕಾರರ್ಯಕ್ರಮದಲ್ಲಿ ಸಿಎಂ ಸಹಾಯಧನ ವರ್ಗಾವಣೆ ಮಾಡಿದರು.
ಪ್ರತಿ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು 5,000 ರೂ.ಗಳಂತೆ ಒಟ್ಟು 2343.20 ರೂ. ನೇಕಾರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲಿದೆ. 2021-22ನೇ ಸಾಲಿನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ 49,544 ನೇಕಾರರಿಗೆ 99.88 ಕೋಟಿ ರೂ. ಹಣವನ್ನು ಡಿ.ಬಿ.ಟಿ ಮೂಲಕ ಬಿಡುಗಡೆ ಮಾಡಲಾಗಿದೆ.
2022-23ನೇ ಸಾಲಿನ ಆಯವ್ಯಯದ ಅನ್ವಯ ನೋಂದಾಯಿತ ಕೈಮಗ್ಗ ನೇಕಾರರಿಗೆ 'ನೇಕಾರ ಸಮ್ಮಾನ್ ಯೋಜನೆ'ಯಡಿ ಆರ್ಥಿಕ ನೆರವನ್ನು 2,000 ರೂ. ಗಳಿಂದ 5,000 ರೂ.ಗಳಿಗೆ ಹೆಚ್ಚಿಸಿದೆ. ಇಲ್ಲಿಯವರೆಗೆ 46,864 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ.
ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ ಕಲೆ ಮತ್ತು ಅವರ ಶ್ರಮವನ್ನು ಪರಿಗಣಿಸಿ ಹಾಗೂ ಕೋವಿಡ್-19 ಮಹಾಮಾರಿ ಮತ್ತು ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21ನೇ ಸಾಲಿನಿಂದ ಅನ್ವಯವಾಗುವಂತೆ, 'ನೇಕಾರ ಸಮ್ಮಾನ್' ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದರು. ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಇಂದು ಯೋಚನೆಗೆ ಚಾಲನೆ ಸಿಕ್ಕಿದೆ.
ಇದನ್ನೂ ಓದಿ: ಸೈನಿಕರ ಕುಟುಂಬಕ್ಕೆ ಅಗತ್ಯ ಸವಲತ್ತು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ