ಬೆಂಗಳೂರು: ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈವರೆಗೆ 13,988 ರೈತರ ಸಾಲದ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಎಂ, ಇದಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯಮಟ್ಟದ ಬ್ಯಾಂಕುಗಳ ಸಭೆ ಕರೆಯಲಾಗಿದೆ. ರೈತರ ಸಾಲ ಮನ್ನಾ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ. ಆದರೆ, ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದರು.
ಮಾಧ್ಯಮಗಳ ಮೇಲೆ ಮತ್ತೆ ಹರಿಹಾಯ್ದ ಸಿಎಂ
ರೈತರ ಖಾತೆಗೆ ಜಮೆ ಆಗಿರುವ ಸಾಲ ಮನ್ನಾ ಹಣ ವಾಪಸ್ಸಾಗಿರುವುದು ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಎಂದು ಬ್ಯಾಂಕಿನವರೇ ಹೇಳಿದ್ದಾರೆ. ಇದರ ಬಗ್ಗೆ ತಿಳಿಯದ ಮಾಧ್ಯಮಗಳು ಸುಮ್ಮನೆ ಸುದ್ದಿ ಮಾಡ್ತಿದ್ದೀರಿ. ನಿಮ್ಮ ಸಂಪಾದಕರಿಗೆ ಈ ಬಗ್ಗೆ ಹೇಳಿ. ಸುಮ್ಮನೆ ಸುದ್ದಿ ಮಾಡುವುದರಿಂದ ನಿಮಗೇನು ಲಾಭ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಬೆಳಗ್ಗೆಯಿಂದ ಸುದ್ದಿ ಮಾಡುತ್ತಿದ್ದಿರಾ... ಇದರಿಂದ ಏನು ಪ್ರಯೋಜನ. ರಾಷ್ಟ್ರೀಯ ಬ್ಯಾಂಕ್ನಿಂದ ಆಗಿರುವ ತಪ್ಪಿಗೆ ನಮ್ಮ ಮೇಲೆ ಯಾಕೆ ದೋಷಿಸುತ್ತೀರಾ?. ಪ್ರಧಾನಿ ಮೋದಿ ಬಗ್ಗೆ ದಿನಾ ಹೊಗಳುತ್ತೀರಾ ಅಲ್ವಾ. ಇದರ ಬಗ್ಗೆಯೂ ಮಾತಾಡಿ. ರಾಜ್ಯ ಅಭಿವೃದ್ಧಿಯಾಗಬೇಕಾ ಅಥವಾ ಹಾಳಾಗಬೇಕಾ ನೀವೇ ನಿರ್ಧಾರ ಮಾಡಿ ಎಂದು ಮಾಧ್ಯಮಗಳ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದರು.
ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. 800 ರೈತರಿಗೆ ಈ ರೀತಿ ಸಮಸ್ಯೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕ್ನಿಂದ ತಪ್ಪಾಗಿರೋದು, ನಮ್ಮಿಂದ ಅಲ್ಲ. ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.
ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ ಹಣ ನೀಡಿದ್ದು, ಒಟ್ಟು 3021 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ನಿಂದ 11 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಈ ರೈತರಿಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದೇವೆ. 2017-18-20ನೇ ಸಾಲಿನಲ್ಲಿ ಸಾಲ ಮನ್ನಾಗೆ 25 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.