ಬೆಂಗಳೂರು: ತಮ್ಮ ಸಂಪುಟದ ನೂತನ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭಾ ಕಲಾಪದಲ್ಲಿ ಸದನಕ್ಕೆ ಪರಿಚಯಿಸಿ ಅಭಿನಂದಿಸಿದ್ದಾರೆ.
ತಮ್ಮ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಮೀನುಗಾರಿಕೆ ಸಚಿವ ಎಸ್.ಅಂಗಾರ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ್, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ರನ್ನು ಸದನಕ್ಕೆ ಪರಿಚಯ ಮಾಡಿಕೊಟ್ಟರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಮ್ಮ ರಾಜ್ಯದ ಪ್ರಸಿದ್ಧ ವೈದ್ಯ ವಿಜ್ಞಾನಿ, ಹೃದ್ರೋಗ ತಜ್ಞ ಡಾ. ಬಿ.ಎಂ.ಹೆಗ್ಡೆಗೆ ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ, ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ವೇದವಿಜ್ಞಾನಿ ಡಾ. ಆರ್.ಎನ್.ಕಶ್ಯಪ್, ಕ್ರೀಡಾಪಟು ಕೆ.ವೈ.ವೆಂಕಟೇಶ್ಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಪದ್ಮ ಪುರಸ್ಕಾರಕ್ಕೆ ಭಾಜನರಾಗಿರುವ ಎಲ್ಲಾ ಸಾಧಕರಿಗೆ ಸದನದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸ್ಪೀಕರ್ ಹೇಳಿದರು.