ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿರುವ ಯಾವುದೇ ಸಚಿವರು ರಾಜೀನಾಮೆ ನೀಡದಂತೆ ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬಂದಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸಂಪುಟ ವಿಸ್ತರಣೆ ಬದಲು ಪುನಾರಚನೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರಂತೆ. ಮೂವರು ಹಿರಿಯ ಸಚಿವರ ರಾಜೀನಾಮೆ ಕೊಡಿಸಿ ಮೂಲ ಬಿಜೆಪಿಗರಿಗೆ ಅವಕಾಶ ಕೊಡುವ ಕುರಿತು ಸಮಾಲೋಚನೆ ನಡೆಸಿರುವ ಕುರಿತು ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಬಿಜೆಪಿ ಸಚಿವಾಕಾಂಕ್ಷಿಗಳು ಸಿಡಿದೆದ್ದಿರುವ ಹಿನ್ನೆಲೆಯಲ್ಲಿ ಮೂವರು ಹಿರಿಯ ಸಚಿವರ ರಾಜೀನಾಮೆ ಕೊಡಿಸಲು ಕೊನೆಯ ಕ್ಷಣದಲ್ಲಿ ಪ್ರಯತ್ನ ನಡೆಸಲು ಸಿಎಂ ಮುಂದಾಗಿದ್ದರು. ಹಿರಿಯ ಸಚಿವರ ರಾಜೀನಾಮೆ ಕೊಡಿಸಿ ನಮಗೆ ಸಚಿವ ಸ್ಥಾನ ಕೊಡಿ ಎಂದು ಪಟ್ಟು ಹಿಡಿದಿರುವ ಸಚಿವಾಕಾಂಕ್ಷಿಗಳ ಬೇಡಿಕೆಯನ್ನು ಪರಿಗಣಿಸಲು ಮುಂದಾಗಿದ್ದಾರೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಿಎಂ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ, ಸಿಎಂ ರಾಜೀನಾಮೆ ಕೇಳಿದರೆ ಕೊಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕೆಲ ಹಿರಿಯ ಸಚಿವರಿಗೆ ಸಲಹೆ ನೀಡಿದ್ದಾರೆ. ಯಾರನ್ನ ರಾಜೀನಾಮೆ ಕೊಡಿಸಲು ಸಿಎಂ ಚಿಂತನೆ ನಡೆಸಿದ್ದಾರೋ ಅವರಿಗೇ ಖುದ್ದಾಗಿ ದೂರವಾಣಿ ಮೂಲಕ ಸಂದೇಶ ನೀಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ನಿಲುವಿಗೆ ಹೈಕಮಾಂಡ್ ವ್ಯತಿರಿಕ್ತ ನಿಲುವು ಹೊಂದಿದ್ದು, ಸಂಪುಟ ವಿಸ್ತರಣೆ ಆಗುತ್ತಾ ಇಲ್ಲ ಪುನಾರಚನೆ ಆಗಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.