ಬೆಂಗಳೂರು : ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯ ವೇಗ ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಬಳಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಭೆಯ ಮುಖ್ಯಾಂಶಗಳು :
* ಕಾಮಗಾರಿ ವೇಗ ಹೆಚ್ಚಿಸಲು 4 ಜಿ ಅನುಮತಿ ನೀಡಲು ಸೂಚಿಸಲಾಯಿತು. ರನ್‌ವೇಯನ್ನು 1.2 ಕಿಲೋಮೀಟರ್ನಿಂದ 2.1 ಕಿಲೋಮೀಟರ್ಗೆ ಹೆಚ್ಚಿಸಲು ಅನುಮತಿ.
* ಈಗಾಗಲೇ ಕಾಮಗಾರಿಗೆ 40 ಕೋಟಿ ರೂ ಹಣ ನೀಡಲಾಗಿದ್ದು ತಕ್ಷಣವೇ ಕೆಲಸ ಆರಂಭಿಸಬೇಕು.
* ಹೆಚ್ಚಿನ ಹಣಕಾಸು ಬೇಕಾದರೆ ಮುಂದಿನ ದಿನಗಳಲ್ಲಿ ಹಣ ನೀಡಲಾಗುವುದೆಂದು ಭರವಸೆ.
* ಒಂದು ವಾರದೊಳಗೆ ಎಲ್ಲಾ ರೀತಿಯ ಪೇಪರ್ ವರ್ಕ್ ಮುಗಿಸಿ ಕೆಲಸ ಆರಂಭಿಸಲು ಸೂಚನೆ.
* 6 ತಿಂಗಳೊಳಗಾಗಿ ಶಿವಮೊಗ್ಗದಲ್ಲಿ ವಿಮಾನಗಳು ಹಾರಾಡಬೇಕು, ಇಲ್ಲದಿದ್ದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಾ ಎಂದು ಎಚ್ಚರಿಕೆ.
* ಸಿಗಂದೂರು ಸೇತುವೆಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒಪ್ಪಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ಲಿಯರೆನ್ಸ್ ತೆಗೆದುಕೊಳ್ಳಲು ಸೂಚನೆ.
* ಶಿವಮೊಗ್ಗ ರೈಲ್ವೇ ಟರ್ಮಿನಲ್ಗೆ ಸಂಬಂಧಿಸಿದಂತೆ ಕೋಟೆ ಗಂಗೂರಿನಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ಸೂಚನೆ.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಸಲಹೆಗಾರ ಎಂ. ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.