ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ಅಗತ್ಯ ನೆರವು ಒದಗಿಸುತ್ತಿರುವ ಸಾಂತ್ವನ ಯೋಜನೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಒನ್ ಸ್ಟಾಪ್ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ ಸಾಂತ್ವನ ಯೋಜನೆಯನ್ನು ಸ್ಥಗಿತಗೊಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಯೋಜನೆ ನೆರವು ನೀಡುತ್ತಿರುವುದರಿಂದ ಈ ಯೋಜನೆಯನ್ನು ಮುಂದುವರೆಸಲು ತೀರ್ಮಾನಿಸಲಾಯಿತು.
ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು ಸುಕನ್ಯಾ ಸಮೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಉಂಟಾದ ಲಾಕ್‍ಡೌನ್ ಸಂದರ್ಭದಲ್ಲಿ ಇಲಾಖೆಯು ಆಹಾರ ಧಾನ್ಯಗಳನ್ನು ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ವಿತರಿಸಿದೆ. ಇದೇ ಅವಧಿಯಲ್ಲಿ 278 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮಾಸ್ಕ್ಗಳನ್ನು ಹೊಲಿದು ವಿತರಿಸಿದ್ದಾರೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ರು.