ಬೆಂಗಳೂರು: ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ಈ ಬಾರಿಯ ಬಜೆಟ್ ನೀಡಿದೆ. ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಸರ್ಕಾರದಿಂದ ಮಾರುಕಟ್ಟೆ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಕರ್ನಾಟಕ ರಾಜ್ಯ ಕೈಗಾರಿಕಾ ಮಹಾ ಸಂಸ್ಥೆ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಕಾರ್ಯಕ್ರಮದಲ್ಲಿ ತಿಳಿಸಿದರು.
ಎಫ್.ಕೆ.ಸಿ.ಸಿ.ಐ ಆಡಿಟೋರಿಯಂನಲ್ಲಿ ನಡೆದ 'ಎಕ್ಸೆಲರೇಟರ್ ಬೆಂಗಳೂರು' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಸಿ. ಪಾಟೀಲ ಭಾಗಿಯಾಗಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ಉದ್ಯಮ ಯೋಜನೆಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ ಬಿಎಸ್ವೈ, ಎಫ್ಕೆಸಿಸಿಐ ನಮಗೆ ಸಾಥ್ ನೀಡುತ್ತಿದೆ, ಕೋವಿಡ್ ಕರಿ ನೆರಳಿನಲ್ಲಿ ಆರ್ಥಿಕ ಚೇತರಿಕೆಯಲ್ಲಿ ಮಹಿಳೆಯರು ಸಮಾನವಾಗಿ ಶ್ರಮಿಸಿದ್ದಾರೆ, ಮಹಿಳೆಯರ ಸಬಲೀಕರಣಕ್ಕೆ ಎಲ್ಲ ರೀತಿ ಅನುಕೂಲ ಮಾಡುವುದಾಗಿ ಸಿಎಂ ಆಶ್ವಾಸನೆ ನೀಡಿದರು.
ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್ ಮಾತನಾಡಿ, ಮೊದಲಿಗೆ ಮಹಿಳಾ ದಿನಾಚರಣೆ ಶುಭಾಶಯ ತಿಳಿಸಿ, ಬಜೆಟ್ನಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹಣ ಮೀಸಲಿಟ್ಟದ್ದು ವಿಶೇಷ. ಸರ್ಕಾರ ಬಜೆಟ್ನಲ್ಲಿ ಕೈಗಾರಿಕಾ ಇಲಾಖೆಗೆ ಪ್ರೋತ್ಸಾಹ ನೀಡಿದೆ ಎಂದರು.
ಮಾಜಿ ಐಎಎಸ್ ಅಧಿಕಾರಿ ರತ್ನಪ್ರಭಾ ಮಾತನಾಡಿ, ಮಹಿಳೆಯರಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ನಾವು ಕೊಡುತ್ತಲೇ ಬಂದಿದ್ದೇವೆ. ಯಡಿಯೂರಪ್ಪನವರು ಮಾತ್ರ ಮಹಿಳಾ ಕೇಂದ್ರಿತ ಬಜೆಟ್ ನೀಡಿದ್ದಾರೆ. ನಾನು ಹಲವು ಮುಖ್ಯಮಂತ್ರಿಗಳ ಜೊತೆ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ, ಆದರೆ ಯಡಿಯೂರಪ್ಪನವರಿಗೆ ಇರುವ ಇಚ್ಛಾಶಕ್ತಿ ಬೇರೆ ಮುಖ್ಯಮಂತ್ರಿಗಳಿಗೆ ಇರಲಿಲ್ಲ ಎಂದು ಹೇಳಿದರು.