ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಅಧಿಕೃತವಾಗಿ ಕಾಂಗ್ರೆಸ್ ತೊರೆದಿರುವ ವಿಧಾನಪರಿಷತ್ ಮಾಜಿ ಸದಸ್ಯ ಸಿಎಂ ಇಬ್ರಾಹಿಂ 'ಕೈ' ಪಕ್ಷದ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ನಾಯಕರನ್ನು ಜೆಡಿಎಸ್ನತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ನಿವಾಸಕ್ಕೆ ಇಂದು ಭೇಟಿ ನೀಡಿದ್ದ ಸಿಎಂ ಇಬ್ರಾಹಿಂ, ಬೇಗ್ಗೆ ಜೆಡಿಎಸ್ಗೆ ಬರುವಂತೆ ಆಹ್ವಾನಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ಗೂ ಇಬ್ರಾಹಿಂ ಗಾಳ ಹಾಕಿದ್ದಾರೆ ಎಂಬ ಮಾಹಿತಿ ಇದೆ.
ಬಹುದಿನಗಳ ಯೋಚನೆಯ ಬಳಿಕ ಕೊನೆಗೂ ಕಾಂಗ್ರೆಸ್ ಪಕ್ಷ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಜೆಡಿಎಸ್ನತ್ತ ಮುಖ ಮಾಡಿರುವ ಕೇಂದ್ರದ ಮಾಜಿ ಸಚಿವರು ಆಗಿರುವ ಸಿಎಂ ಇಬ್ರಾಹಿಂ, ಈಗಾಗಲೇ ಜೆಡಿಎಸ್ ವರಿಷ್ಠ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದಿಂದ ನಾಯಕರು ಜೆಡಿಎಸ್ಗೆ ಸೇರ್ಪಡೆಯಾಗುವ ಆಸಕ್ತಿ ತೋರಿಸಿದರೆ, ಅವರ ಜೊತೆ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನೂ ಇಬ್ರಾಹಿಂಗೆ ನೀಡಲಾಗಿದೆ. ಎಲ್ಲ ಪಕ್ಷಗಳಲ್ಲಿ ಆತ್ಮೀಯರನ್ನು ಹೊಂದಿರುವ ಸಿಎಂ ಇಬ್ರಾಹಿಂ, ಇದೀಗ ಜೆಡಿಎಸ್ ಪಕ್ಷ ಬಲಗೊಳಿಸಲು ಸಹಕರಿಸುವ ಹಾಲಿ ಮಾಜಿ ಶಾಸಕರು ಹಾಗೂ ಸಚಿವರನ್ನು ಗುರಿಯಾಗಿಸಿಕೊಂಡು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.
ಕೆಲ ನಾಯಕರನ್ನು ಪಕ್ಷಕ್ಕೆ ಕರೆತರುವ ಭರವಸೆ ನೀಡಿರುವ ಇಬ್ರಾಹಿಂ: ಕಾಂಗ್ರೆಸ್ ಪಕ್ಷ ತೊರೆಯುವುದು ಖಚಿತವಾಗುತ್ತಿದ್ದಂತೆ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವ ಇಬ್ರಾಹಿಂ ಒಂದಿಷ್ಟು ನಾಯಕರನ್ನು ಜೆಡಿಎಸ್ಗೆ ಕರೆತರುವುದಾಗಿ ದೇವೇಗೌಡರಿಗೆ ಭರವಸೆ ನೀಡಿದ್ದಾರೆ.
ಈ ಕಾರಣಕ್ಕಾಗಿಯೇ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇರವಾಗಿ ಇಬ್ರಾಹಿಂ ನಿವಾಸಕ್ಕೆ ತೆರಳಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ್ದರು. ಜೆಡಿಎಸ್ ಬಲವರ್ಧನೆಗೆ ಒಂದಿಷ್ಟು ನಾಯಕರನ್ನು ಸೆಳೆಯುವುದಕ್ಕೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಇಬ್ರಾಹಿಂಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ರಾಹುಲ್ ಸಭೆಗೆ ಜಮೀರ್ಗೆ ಸಿಕ್ಕಿರಲಿಲ್ಲ ಆಹ್ವಾನ: ಕಳೆದ ತಿಂಗಳು ದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಡೆಸಿದ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಪಾಲ್ಗೊಂಡಿದ್ದರು.
ಈ ಮೂವರು ನಾಯಕರು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡರನ್ನು ಜೊತೆಗೆ ಕರೆದೊಯ್ದಿದ್ದರು. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಸದಾ ಅವರೊಂದಿಗೆ ತೆರಳುತ್ತಿದ್ದ ಜಮೀರ್ ಅಹಮದ್ಗೆ ಆಹ್ವಾನ ಸಿಕ್ಕಿರಲಿಲ್ಲ. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಅವರನ್ನು ದೂರವಿರಿಸಿದರೆ ಎಂಬ ಮಾಹಿತಿಯೂ ಇದೆ.
ಒಂದು ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದ ಜಮೀರ್ ಅಹಮದ್ ಇದೀಗ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿರುವ ಹಾಗೂ ಮುಖ್ಯವಾಗಿ ಸಿದ್ದರಾಮಯ್ಯ ತಮ್ಮನ್ನು ದೂರ ಇರಿಸಿರುವುದಕ್ಕೆ ತೀವ್ರ ಬೇಸರಗೊಂಡಿದ್ದಾರೆ.
ಅಸಮಾಧಾನಿತರನ್ನು ಜೆಡಿಎಸ್ನತ್ತ ಸೆಳೆಯಲು ಇಬ್ರಾಹಿಂ ಪ್ರಯತ್ನ: ಇವರಿಗಿರುವ ಈ ಅಸಮಾಧಾನವನ್ನು ಸದ್ಬಳಕೆ ಮಾಡಿಕೊಂಡು ಜೆಡಿಎಸ್ನತ್ತ ಮತ ಸೆಳೆಯುವ ಪ್ರಯತ್ನಕ್ಕೆ ಸಿಎಂ ಇಬ್ರಾಹಿಂ ಮುಂದಾಗಿದ್ದಾರೆ. ಜಮೀರ್ರನ್ನ ಭೇಟಿಯಾಗಿ ಜೆಡಿಎಸ್ ಸೇರುವಂತೆ ಒತ್ತಾಯ ಮಾಡಿದ್ದಾರೆ. ಪಕ್ಷದ ವಿರುದ್ಧ ತೀವ್ರ ಬೇಸರಗೊಂಡಿರುವ ಜಮೀರ್, ನಿನ್ನೆ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಸಹ ಕಾಂಗ್ರೆಸ್ ದೊರೆಯುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅತಿ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಹೊಂದಿರುವ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿದರೂ ಗೆಲ್ಲುವುದು ನಿಶ್ಚಿತ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ.
ಇದರಿಂದಲೇ ಮುಂಬರುವ ದಿನಗಳಲ್ಲಿ ಜೆಡಿಎಸ್ ನಾಯಕರ ಜೊತೆ ಸಮಾಲೋಚಿಸಿ, ಮುಂದಿನ ವಿಧಾನಸಭೆ ಚುನಾವಣೆ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಭೋಜನಕೂಟದಲ್ಲಿ ಭಾಗಿ: ಇಂದು ರೋಷನ್ ಬೇಗ್ ಜೊತೆ ಸಿಎಂ ಇಬ್ರಾಹಿಂ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿನ ಹೆಬ್ಬಾಳದ ಜೆಡಿಎಸ್ ನಾಯಕ ರುದ್ರಪ್ಪ ಅವರ ಮನೆಗೆ ತೆರಳಿ ಅಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಸಾಮೂಹಿಕವಾಗಿ ಯುಗಾದಿ ಹಬ್ಬ ಆಚರಿಸಿ ಸಾಮೂಹಿಕ ಭೋಜನ ಮಾಡುವ ಮೂಲಕ ನಾಡಿಗೆ ಸೌಹಾರ್ದ ಸಂದೇಶ ಸಾರಿದ್ದಾರೆ.
ರೋಷನ್ ಬೇಗ್ ಜೆಡಿಎಸ್ ಸೇರುವುದು ಬಹಿತೇಕ ಖಚಿತವಾಗಿದ್ದು ಜಮೀರ್ ಅಹ್ಮದ್ ತಮ್ಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ. ಎರಡು ವರ್ಷದ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸಿದ 17 ಶಾಸಕರಲ್ಲಿ ಒಬ್ಬರಾಗಿದ್ದ ರೋಷನ್ ಬೇಗ್, ನಂತರ ಬಿಜೆಪಿಯನ್ನು ಸೇರಲಾಗದೆ ಶಿವಾಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲನುಭವಿಸಿ ರಾಜಕೀಯ ಅತಂತ್ರ ಸ್ಥಿತಿಗೆ ತಲುಪಿದ್ದರು. ಇದೀಗ ಜೆಡಿಎಸ್ ಸೇರ್ಪಡೆಯಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಶಿವಾಜಿನಗರ ಅಭ್ಯರ್ಥಿಯಾಗುವ ಸಿದ್ಧತೆ ಮಾಡಿಕೊಳ್ಳಲು ಚಿಂತನೆ ನಡೆಸಿದಂತಿದೆ.
'ಕೈ'ಗೆ ಮತ್ತಷ್ಟು ಬಂಡಾಯದ ಆತಂಕ: ರಾಜ್ಯಕ್ಕೆ ಗುರುವಾರ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸಿಕೊಂಡು ಸಾಗುವ ಹಾಗೂ ಪಕ್ಷವನ್ನು ಬಲವರ್ಧನೆಗೊಳಿಸುವ ಮಹತ್ವದ ಗುರಿಯನ್ನು ನೀಡಿ ರಾಜ್ಯದ ನಾಯಕರಿಗೆ ನೀಡಿ ದೆಹಲಿಗೆ ತೆರಳಿದ್ದಾರೆ. ಆದರೆ, ಇತ್ತ ಪಕ್ಷದಲ್ಲಿ ಅತೃಪ್ತ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಎಸ್.ಆರ್ ಪಾಟೀಲ್ಗೆ ಕಳೆದ ಡಿಸೆಂಬರ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿರಲಿಲ್ಲ. ಇದರಿಂದ ಬೇಸರಗೊಂಡಿರುವ ಅವರು ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರಮುಖರ ಸಭೆ ಕರೆದಿದ್ದರೂ ಸಹ ಅದರಲ್ಲಿಯೂ ಎಸ್.ಆರ್ ಪಾಟೀಲ್ ಭಾಗವಹಿಸಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಅವರೂ ಕೂಡ ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಸ್ಪಷ್ಟವಾಗುತ್ತಿದೆ. ಇನ್ನೊಂದೆಡೆ ಅವರು ಇದೇ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಜೊತೆ ಇದ್ದರು. ಹಾಗೂ ಉಭಯ ನಾಯಕರು ಮಹತ್ವದ ಸಭೆ ಕೂಡ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಧಾನಸಭೆ ಚುನಾವಣೆ ಗೆಲ್ಲುವ ರಣತಂತ್ರ ರೂಪಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದೀಗ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ನಾಯಕರ ಅಪಸ್ವರವೇ ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಗೋಚರಿಸುತ್ತಿದೆ. ಇದಕ್ಕೆಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ರೀತಿ ಪರಿಹಾರ ಹುಡುಕಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಕಚೇರಿಯಿಂದ ಮನೆ ಕಡೆ ಕೊನೆಯ ಟ್ರಿಪ್' : ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಭಾಸ್ಕರ್ ರಾವ್ ಟ್ವೀಟ್