ಬೆಂಗಳೂರು: "ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಅಧಿಕಾರನೇ ಇಲ್ಲ. ಹಾಗಾಗಿ ಎಲ್ಲವನ್ನೂ ಕಾದುನೋಡುವುದೇ ಒಳಿತು" ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಇದೇ ವೇಳೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಅವರು, ತಾಯಿ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಲಿ. ದುಷ್ಟ ಶಕ್ತಿಗಳ ಸಂಹಾರ ಆಗಲಿ. ಸೃಷ್ಟಿ ಶಕ್ತಿಗಳು ಭಾರತ ದೇಶದಲ್ಲಿ ತಲೆ ಎತ್ತಲಿ" ಎಂದರು.
"ಶೇ 100ರಷ್ಟು ಟೆಕ್ನಿಕಲಿ, ಮೆಂಟಲಿ ನಾನು ಜೆಡಿಎಸ್‌ನಲ್ಲೇ ಇದ್ದೇನೆ. ನಾನೇ ಅದರ ಅಧ್ಯಕ್ಷ ಅಂತ ಹೇಳಿದ್ದೇನೆ. ರಾಜ್ಯ ಘಟಕ ವಿಸರ್ಜನೆ ಮಾಡುವುದಕ್ಕೆ ಬರಲ್ಲ. ದೇವೇಗೌಡರು ತಪ್ಪು ಮಾಡಿದ್ದಾರೆ ಎಂದು ನೋವು ಆಗಿಲ್ಲ. ಇದನ್ನು ಸರಿಪಡಿಸಿಕೊಂಡು ಹೋಗೋಣ. ಇದಕ್ಕೆ ಒಪ್ಪಿದರೆ ಒಟ್ಟಾಗಿ ಹೋಗಲು ಸಿದ್ಧ. ವಿಜಯದಶಮಿಯಲ್ಲಿ ಬನ್ನಿ ಹಂಚುವುದು ಪದ್ಧತಿ, ನನಗೆ ಬೇವು ಬೆಲ್ಲ ಎರಡೂ ಸಿಕ್ಕಿದೆ. ದೇವೇಗೌಡರು ಹಿರಿಯರು, ಅವರಿಗೆ ಇನ್ನೊಮ್ಮೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ" ಎಂದು ಮನವಿ ಮಾಡಿದರು.
"ಕಾರ್ಯಕ್ರಮಕ್ಕಾಗಿ ನಾನು ಉದಯಪುರಕ್ಕೆ ಹೋಗ್ತಿದ್ದೀನಿ. ಅ.25ಕ್ಕೆ ವಾಪಸ್ ಬಂದು ಅ.26ಕ್ಕೆ ಬಾಂಬೆಗೆ ಹೋಗ್ತೀನಿ. ಇವತ್ತು ರಾಜ್ಯದಲ್ಲಿ ಯಾವ ಸಿದ್ಧಾಂತಕ್ಕೆ ನಿಂತಿದ್ದೇವೋ ಆ ಸಿದ್ಧಾಂತಕ್ಕೆ ದೇವೇಗೌಡರು ನಿಲ್ಲಬೇಕು ಎನ್ನುವುದು ನನ್ನ ಇಚ್ಛೆ. ಉದಯಪುರದಲ್ಲಿ ಜೆಡಿಎಸ್ ಕಾರ್ಯಕ್ರಮ ಇದೆ, ಬೇರೆ ಪಾರ್ಟಿ ನಾಯಕರನ್ನೂ ಭೇಟಿ ಮಾಡುತ್ತೇನೆ. ನಾನು ಒಂದೇ ಕಡೆ ಕೂರಲ್ಲ, ತ್ರಿಲೋಕ ಸಂಚಾರಿ" ಎಂದರು.
ದೇವೇಗೌಡರಿಂದ ನನ್ನ ಮನೆ ಹಾಳಾಗಿವೆ ಎಂಬ ಹೇಳಿಕೆ ವಿಚಾರದ ಕುರಿತು ಸ್ಪಷ್ಟೀಕರಣ ನೀಡಿದ ಇಬ್ರಾಹಿಂ, "ಖಂಡಿತವಾಗಿ ನಾನು ಹೇಳಬಾರದ್ದು ಅದು. ನಾನು ಎಂಎಲ್ಸಿ ಸ್ಥಾನದಲ್ಲಿದ್ದೆ. ರಾಜೀನಾಮೆ ಕೊಡಿಸಿ ಕರೆದುಕೊಂಡು ಬಂದು, ನೀವು ಬಿಜೆಪಿಗೆ ಹೋದರೆ ನನ್ನ ಮನೆ ಹಾಳಾಗದೆ ಏನಾಗುತ್ತೆ?. ನನ್ನ ಉದ್ಧಾರ ಆಗಿದೆಯೇ, ಮನಸ್ಸಿಗೆ ನೋವು ಆಗಲ್ಲವೇ? ಆ ನೋವನ್ನು ನುಂಗಿದ್ದೀನಿ" ಎಂದು ಹೇಳಿದರು.
ಕಾನೂನು ಹೋರಾಟ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, "ವಿಜಯದಶಮಿ ಹಬ್ಬವಾಗಲಿ, ಅ.26 ಮುಗಿಯಲಿ, ಆಮೇಲೆ ಏನಾದರೂ ತೀರ್ಮಾನ ಮಾಡ್ತಾರಾ ಅಂತ ದೇವೇಗೌಡರ ಮೇಲೆ ನನಗೆ ಭರವಸೆ ಇದೆ. ಕುಮಾರಸ್ವಾಮಿ ತೀರ್ಮಾನ ಮಾಡಬೇಕು, ಆದರೆ ಅವರ ಮೇಲೆ ನನಗೆ ಭರವಸೆ ಇಲ್ಲ. ನನ್ನ ಸಂಪರ್ಕದಲ್ಲಿ ಇರುವವರಿಗೆಲ್ಲ ಅ.26ರ ವರೆಗೂ ಕಾಯಿರಿ ಅಂತ ಹೇಳಿದ್ದೇನೆ. 27ಕ್ಕೆ ಕೇರಳದಲ್ಲಿ ಸಭೆ ಕರೆದಿದ್ದಾರೆ. ಪಾಟ್ನಾದಲ್ಲಿ ಎಲ್ಲ ಸೇರೋಣ ಅಂತ ಹೇಳ್ತಿದ್ದಾರೆ" ಎಂದರು.
ಕಾಂಗ್ರೆಸ್ನಿಂದ ಆಹ್ವಾನ ವಿಚಾರದ ಕುರಿತು ಮಾತನಾಡಿ, "ಕಾಂಗ್ರೆಸ್ನಿಂದ ಅಲ್ಲ ಎಲ್ಲ ಕಡೆಯಿಂದ ಕರೆ ಬರ್ತಿದೆ. ಆದರೆ ಸಿದ್ದರಾಮಯ್ಯರಿಂದ ನನಗೆ ಕಾಲ್ ಬಂದಿಲ್ಲ. ನಾನು ಸಿದ್ದರಾಮಯ್ಯಗೆ ಕರೆ ಮಾಡೋಕೆ ಹೋಗಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ - ಜೆಡಿಎಸ್ ಮೈತ್ರಿಗೆ ಕೇರಳದ ಸಿಪಿಎಂ ಬೆಂಬಲಿಸುತ್ತದೆ ಎಂದು ನಾನು ಹೇಳಿಲ್ಲ: ದೇವೇಗೌಡರ ಸ್ಪಷ್ಟನೆ