ಬೆಂಗಳೂರು: ಯಾವುದೇ ಭಯವಿಲ್ಲದೆ ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವಿಶ್ವನಾಥ್ ಮೈಸೂರಿನವರು. ಪುಸ್ತಕ ಬರೆದವರು, ಇತಿಹಾಸ ಅರಿತವರು. ಅವರು ಯಾವ ಪಾರ್ಟಿಯಲ್ಲಿದ್ದಾರೆ ಎಂಬುದು ಬೇಕಿಲ್ಲ. ಸ್ವತಃ ಯಡಿಯೂರಪ್ಪನವರೇ ಟಿಪ್ಪು ಸಾಧನೆಯನ್ನು ಹೊಗಳಿದ್ದಾರೆ. ರಾಷ್ಟ್ರಪತಿಗಳೂ ಟಿಪ್ಪು ಗುಣಗಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಹೆಚ್.ವಿಶ್ವನಾಥ್ ಸಚಿವರಾಗಬೇಕು. ಇದು ನನ್ನ ಆಸೆಯೂ ಹೌದು. ಸುಮ್ಮನೆ ಬಿಜೆಪಿ ಅಂತ ವಿರೋಧ ಮಾಡೋದಲ್ಲ. ಸುರೇಶ್ ಕುಮಾರ್ ನನ್ನ ಜೈಲ್ ಮೇಟ್. ಅವರ ಬಗ್ಗೆ ನನಗೆ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಸುರೇಶ್ ಕುಮಾರ್ ಮೇಲೆ ಪಠ್ಯದಿಂದ ಟಿಪ್ಪು ಕೈಬಿಡೋಕೆ ಒತ್ತಡವಿದೆ. ಹುತಾತ್ಮರಾದವರನ್ನು ಯಾಕೆ ವಿರೋಧಿಸಬೇಕು. ಕಾಯಿಲೆ ಬಂದು ಟಿಪ್ಪು ಸತ್ತಿದ್ದರೆ ಬೇಡ. ಹೋರಾಟದಿಂದ ಅವರು ಸಾವನ್ನಪ್ಪಿದ್ದು ಎಂದರು.
ಓಟ್ ಬ್ಯಾಂಕ್ ಅನ್ನುತ್ತಿದ್ದರು:
ಇಷ್ಟು ದಿನ ವೋಟ್ ಬ್ಯಾಂಕ್ ಅಂತ ಕಾಂಗ್ರೆಸ್ನವರನ್ನು ದೂರುತ್ತಿದ್ದರು. ಇಲ್ಲಿಯವರೆಗೆ ಹಿಂದುತ್ವದ ಬಗ್ಗೆ ಮಾತನಾಡಿದ್ರು. ಡಿ.ಜೆ.ಹಳ್ಳಿ ಪ್ರಕರಣ ಕೂಡ ತಳುಕು ಹಾಕೋಕೆ ನೋಡಿದ್ರು. ಈಗ ಅದೂ ಡ್ರಗ್ ಮಾಫಿಯಾದಿಂದ ಅನ್ನೋದು ಗೊತ್ತಾಗಿದೆ. 326 ಜನರನ್ನು ಪೊಲೀಸರು ಹಿಡಿದಿದ್ದಾರೆ. ಅವರಲ್ಲಿ ಯಾರಾದರೂ ಡ್ರಗ್ಸ್ನವರಿದ್ದಾರಾ? ಡಿ.ಜೆ.ಹಳ್ಳಿ ಗಾಂಜಾ, ಅಫೀಮು ತಾಣ. ಇವತ್ತು ಮೂರು ಕೋಟಿ ಗಾಂಜಾ ವಶಕ್ಕೆ ಪಡೆದಿದ್ದಾರೆ ಎಂದರು.
ಶೃಂಗೇರಿ ಶ್ರೀಗಳ ಬಗ್ಗೆ ನಿಮಗೆ ನಂಬಿಕೆಯಿದೆಯಲ್ಲ. ಆ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿ. ನಂಜನಗೂಡು ದೇಗುಲಕ್ಕೆ ಟಿಪ್ಪು ಹೇಗೆ ನಡೆದುಕೊಂಡ್ರು. ಟಿಪ್ಪು ಕೊಟ್ಟ ಪಚ್ಚೆ ವಜ್ರಕ್ಕೆ ಇವತ್ತಿಗೂ ಮಂಗಳಾರತಿ ನಡೆಯುತ್ತೆ. ನಂತರ ಶ್ರೀಕಂಠೇಶ್ವರನಿಗೆ ಪೂಜೆಯಾಗುತ್ತೆ. ಶೃಂಗೇರಿಯಲ್ಲಿ 1,000 ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದ ಹಣ ಹೋಗ್ತಿತ್ತು ಎಂದು ಇಬ್ರಾಹಿಂ ಹೇಳಿದರು.
ಕಿಡಿಗೇಡಿಗಳು ಎಲ್ಲಾ ಸಮಾಜದಲ್ಲೂ ಇದ್ದಾರೆ:
ಮತ್ತೆ ಟಿಪ್ಪು ವಿಷಯ ತೆಗೆದು ರಾಜಕಾರಣ ಮಾಡೋದು ಬೇಡ. ಶೃಂಗೇರಿ ಧ್ವಜವನ್ನು ಗೂಬೆ ಕೂರಿಸೋಕೆ ಹೋಗಿದ್ರು. ಕುಡಿದವನು ಅದನ್ನು ತರೋದು ನೋಡಿ ಸುಮ್ಮನಾದ್ರು. ಕಿಡಿಗೇಡಿಗಳು ಎಲ್ಲ ಸಮಾಜದಲ್ಲೂ ಇದ್ದಾರೆ. ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಂರಲ್ಲೂ ಇದ್ದಾರೆ. ಯಾರೋ ಒಬ್ಬರು ಮಾಡಿದ್ದಕ್ಕೆ ಎಲ್ಲರಿಗೆ ಅಂಟಿಸೋದು ಬೇಡ. ಯಾರ ಹೃದಯ ಚೆನ್ನಾಗಿದೆ ಅವರಿಗೆ ಟಿಪ್ಪು ಚೆನ್ನಾಗಿದ್ದಾನೆ. ಯಾರಿಗೆ ಜಾತಿ ವೈರಸ್ ಇದ್ಯೋ ಅವರಿಗೆ ಟಿಪ್ಪು ವಿರೋಧಿ ಎಂದು ಬಿಜೆಪಿ ನಾಯಕರನ್ನು ಖಂಡಿಸಿದರು.
ಬಿಜೆಪಿಯವರು ಇಲ್ಲಿ ಸ್ಟೇಟ್ಮೆಂಟ್ ಕೊಡೋದು ಬೇಡ. ಆ ನಡ್ಡಾ-ಪಡ್ಡಾ ಮುಂದೆ ಮಾತನಾಡಲಿ. ಕೆರೆಯಲ್ಲಿ ಈಜೋದು ಬೇಡ, ಸಮುದ್ರದಲ್ಲಿ ಈಜಿ. ಡಿ.ಜೆ.ಹಳ್ಳಿ ಡ್ರಗ್ ಬಗ್ಗೆ ಇವತ್ತು ಆಯುಕ್ತರು ಹೇಳಿದ್ದಾರೆ. ಡ್ರಗ್ಸ್ ಮಾಫಿಯಾ ನಡುವಿನ ಘರ್ಷಣೆ ಇದಕ್ಕೆ ಕಾರಣ ಅಂತ. ಪಾದರಾಯನಪುರದಲ್ಲೂ ಇದು ಕಾಣಬಹುದು. ಈಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಪೊಲೀಸರು ಮನಸ್ಸು ಮಾಡಿದರೆ ಪ್ರಕರಣ ಮೂರು ದಿನಕ್ಕೆ ಮುಗಿಸಬಹುದು ಎಂದರು.
ಕಾಂಗ್ರೆಸ್ನಲ್ಲೂ ಇಲ್ಲ ಬಿಜೆಪಿಯಲ್ಲೂ ಇಲ್ಲ:
ರೋಷನ್ ಬೇಗ್ ಯಾರು ಅನ್ಬೋದನ್ನು ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸೋದು ಯಾಕೆ? ಕಾಂಗ್ರೆಸ್ನವರ ಕೈವಾಡ ಇದೆ ಅಂದ್ರೆ ಹೇಳಲಿ. ಈಗ ಅವರು ಕಾಂಗ್ರೆಸ್ನಲ್ಲೂ ಇಲ್ಲ, ಬಿಜೆಪಿಯಲ್ಲೂ ಇಲ್ಲ. ಅವರು ಇಂಡಿಪೆಂಡೆಂಟ್ ಎಂದು ಹೇಳಿದರು.