ಬೆಂಗಳೂರು: ಪಠ್ಯಪುಸ್ತಕ ವಿವಾದ ಹಾಗೂ ಇಡೀ ಪರಿಷ್ಕೃತ ಪಠ್ಯ ವಾಪಸ್ಗೆ ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಪಠ್ಯದಲ್ಲಿರುವ ವಿವಾದಿತ ಅಂಶಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ಸರ್ಕಾರದ ಮುಂದಿರುವ ಆಯ್ಕೆಯ ಕುರಿತು ಸಮಾಲೋಚನೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಚರ್ಚಿಸಲು ಕರೆದಿದ್ದ ತುರ್ತು ಸಭೆಯನ್ನು ಸರ್ಕಾರಿ ನಿವಾಸದಿಂದ ಆರ್.ಟಿ.ನಗರದ ಖಾಸಗಿ ನಿವಾಸಕ್ಕೆ ಸಿಎಂ ಸ್ಥಳಾಂತರಿಸಿದರು. ಸಿಎಂ ನಿರ್ದೇಶನದ ಮೇರೆಗೆ ಆರ್.ಟಿ ನಗರ ನಿವಾಸಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಮಿಸಿದರು.
ಸಿಎಂಗೆ ಪಠ್ಯ ಪರಿಷ್ಕರಣೆ ಬಗ್ಗೆ ವರದಿ ನೀಡಿದ ಅಧಿಕಾರಿಗಳು, ಪಠ್ಯಪುಸ್ತಕದ ಯಾವ ಸಾಲುಗಳು ವಿವಾದಕ್ಕೆ ಕಾರಣವಾಗಿದೆ. ಯಾವುದನ್ನು ಕೈಬಿಡಲಾಗಿದೆ, ಯಾವುದನ್ನು ಸೇರಿಸಲಾಗಿದೆ ಅಂತ ಮಾಹಿತಿ ನೀಡಿದರು. ನಂತರ ಸಚಿವ ಬಿ.ಸಿ.ನಾಗೇಶ್ ಅವರಿಂದಲೂ ಮತ್ತಷ್ಟು ಮಾಹಿತಿ ಪಡೆದುಕೊಂಡರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬರೆದಿರುವ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಪಠ್ಯ ಪರಿಷ್ಕರಣೆ ಸಂಬಂಧ ದೇವೇಗೌಡರ ಸಲಹೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕೃತ ಪಠ್ಯ ವಾಪಸ್ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಏನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾಯಿತು. ಯಾವ ಉತ್ತರವನ್ನು ಗೌಡರಿಗೆ ನೀಡಬೇಕು ಎನ್ನುವ ಕುರಿತು ಮಾತುಕತೆ ನಡೆಸಲಾಯಿತು.
ವಿಸ್ತೃತ ಚರ್ಚೆ ನಡೆಸಿ ಸಭೆ ಮುಗಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲ ಆಯಾಮದಲ್ಲಿಯೂ ಅವಲೋಕನ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದು, ನಾಳೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಪಠ್ಯಪುಸ್ತಕ ಪರಿಷ್ಕರಣೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಪ್ರಧಾನಮಂತ್ರಿಗಳು ಸಿಎಂಗೆ ಪತ್ರ ಬರೆದಿದ್ದರು. ಆ ಕಂಟೆಂಟ್ ಬಗ್ಗೆ ವಿವರಣೆ ಪಡೆಯಲು ಸಿಎಂ ಸಭೆ ಕರೆದಿದ್ದರು. ಪೂರ್ಣ ಮಾಹಿತಿ ನೀಡಿದ್ದೇವೆ. ಕೆಲವು ಕಂಟೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದರು. ನಾಳೆ ಅದರ ಮಾಹಿತಿಯನ್ನು ನೀಡುತ್ತೇವೆ ಎಂದರು.
ಎಲ್ಲರ ಪತ್ರಗಳಿಗೂ ಸಿಎಂ ಉತ್ತರ ನೀಡಿದ್ದಾರೆ. ಎಂಟರಂದು ನೀಡಿದ ಮಾಹಿತಿಯಲ್ಲಿ ಎಲ್ಲಾ ವಿವರ ನೀಡಿದ್ದೇವೆ. ಅಂಬೇಡ್ಕರ್, ಬಸವಣ್ಣ ಎಲ್ಲಾ ಮಾಹಿತಿ ನೀಡಿದ್ದೇವೆ. ಯಾವುದಾದರೂ ಲೋಪದೋಷಗಳಿದ್ದರೆ ಅದನ್ನ ಸರಿಪಡಿಸುವುದಾಗಿ ಸ್ಪಷ್ಟಪಡಿಸಿದ್ದೇವೆ. ದೇವೇಗೌಡರ ಪತ್ರ ಈಗ ಬಂದಿದೆ. ಹಾಗಾಗಿ, ಉತ್ತರ ನೀಡಲು ವರದಿ ಪಡೆದಿದ್ದಾರೆ.
ಇಂಚಿಂಚೂ ಮಾಹಿತಿ ನೀಡಿದ್ದೇವೆ. 15 ಜನ ಸಾಹಿತಿಗಳು ಪತ್ರ ಬರೆದಿದ್ದರು. ಅದರಲ್ಲಿ 9 ಜನರ ಪಠ್ಯವೇ ಇರಲಿಲ್ಲ. ಅದಕ್ಕೂ ಅವರಿಗೂ ಸಂಬಂಧವೇ ಇರಲಿಲ್ಲ. ಆದರೂ ಉತ್ತರ ನೀಡಿದ್ದೇವೆ. ನಾಳೆ ಎಲ್ಲದಕ್ಕೂ ಸಿಎಂ ಅವರೇ ಉತ್ತರ ನೀಡಲಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿನ್ನೂ ಓಮಿಕ್ರಾನ್ ತಳಿಗಳು ಪ್ರಾಬಲ್ಯ ಹೊಂದಿವೆ: ಸಚಿವ ಸುಧಾಕರ್ ಟ್ವೀಟ್