ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವೆಸ್ಟ್ ಎಂಡ್ ಹೋಟೆಲ್ ತೊರೆದು ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಸಿಎಂ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದು, ಶಾಸಕರು, ಸಚಿವರು ಹಾಗೂ ಜನಸಾಮಾನ್ಯರಿಗೆ ಸಿಗುತ್ತಿರಲಿಲ್ಲ ಎಂದು ಸಿಎಂ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ಪಂಚತಾರಾ ಹೋಟೆಲ್ ಖಾಲಿ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ಕಳೆದಿದ್ದು, ಸಿಎಂ ಧೋರಣೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಜೊತೆಗೆ ದೇವೇಗೌಡರ ಕುಟುಂಬದಿಂದಲ್ಲೂ ಸಹ ಆಕ್ಷೇಪ ವ್ಯಕ್ತವಾಗಿತ್ತು. ಹೋಟೆಲ್ ತೊರೆದು ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಬೇಕು. ಶಾಸಕರಿಗೆ ತಾವು ಸಿಗಬೇಕೆನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾರ್ಗದರ್ಶನದ ಹಿನ್ನೆಲೆ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಜನರು ಮತ್ತು ಪ್ರತಿಪಕ್ಷದ ಟೀಕೆಯನ್ನು ಗಮನಿಸಿರುವ ಸಿಎಂ ತಮ್ಮ ಕಾರ್ಯವೈಖರಿ ಹಾಗೂ ಜೀವನ ಶೈಲಿಯನ್ನು ಬದಲು ಮಾಡಿಕೊಳ್ಳಲು ನಿರ್ಧರಿಸಿ, ಪಂಚತಾರಾ ಹೋಟೆಲ್ ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.