ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಕಾರ್ಮಿಕರಿಗೆ ಐದು ಸಾವಿರ ಧನ ಸಹಾಯ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ತಾವು ಮಾರ್ಚ್ 6 ರಂದು ಬರೆದಿರುವ ಪತ್ರ ತಲುಪಿದೆ. ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಚರ್ಚಿಸಿ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ನಮ್ಮ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಬೆಂಬಲ ಸೂಚಿಸಿರುವುದಕ್ಕೆ ಸರ್ಕಾರದ ವತಿಯಿಂದ ಧನ್ಯವಾದಗಳು ಎಂದು ಸಿಎಂ ಪತ್ರ ಬರೆದಿದ್ದಾರೆ.
ತಾವು ಪ್ರಸ್ತಾಪಿಸಿರುವಂತೆ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ಬದಲಾಗಿ ಎರಡು ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲು ಕ್ರಮವಹಿಸಲಾಗಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಐದು ಸಾವಿರ ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಪ್ರಸ್ತಾಪಿಸಿರುವ ಹಾಲು ಉತ್ಪಾದನೆ, ವಿತರಣೆ ಇತ್ಯಾದಿಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಹಾಲನ್ನು ಬಡವರು (ಬಿಪಿಎಲ್) ಮತ್ತು ಕಾರ್ಮಿಕರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ನಂತೆ ವಿತರಿಸಲು ಸೂಚನೆ ನೀಡಲಾಗಿರುತ್ತದೆ. ಅದೇ ರೀತಿ ರೈತರು ಬೆಳೆದ ಬೆಳೆ, ಹಣ್ಣು, ತರಕಾರಿ ಇತ್ಯಾದಿ ಅಗತ್ಯ ಉತ್ಪನ್ನಗಳನ್ನು ಸುಮಾರು 500 ಹಾಪ್‌ಕಾಮ್‌ಗಳ ಮೂಲಕ ಸೂಕ್ತ ದರಕ್ಕೆ ಖರೀದಿಸಿ ವಿತರಿಸಲು ಕ್ರಮವಹಿಸಲಾಗಿದೆ. ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.