ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಕಾರ್ಯೋನ್ಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ರಾಜಧಾನಿ ಕೊರೊನಾ ನಿಯಂತ್ರಣ ಕುರಿತು ವರ್ಚುವಲ್ ಮೂಲಕ ಬೆಂಗಳೂರಿನ ಸಚಿವರ ಜೊತೆ ಸಭೆ ನಡೆಸಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿ ವಿಶ್ರಾಂತಿ ಪಡೆದ ಸಿಎಂ ನಂತರ ಅಧಿಕಾರಿಗಳಿಂದ ಬೆಂಗಳೂರಿನ ಕೊರೊನಾ ಸ್ಥಿತಿಗತಿ, ಜಾರಿಗೆ ತಂದಿರುವ ಕಠಿಣ ಮಾರ್ಗಸೂಚಿ ಅನುಷ್ಠಾನ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಬೆಂಗಳೂರಿನ ಸಚಿವರ ಜೊತೆ ಮಹತ್ವದ ಸಭೆ ನಡೆಸಿದರು.
ಸಚಿವರಾದ ಸುಧಾಕರ್, ಸುರೇಶ್ ಕುಮಾರ್ ಸೇರಿ ಕೆಲವರು ಜಿಲ್ಲೆಗಳಲ್ಲಿರುವ ಕಾರಣ ಬೆಂಗಳೂರಿನ ಸಚಿವರು ಹಾಗು ಕೋವಿಡ್ ಗೆ ಸಂಬಂಧಪಟ್ಟವರ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು, ಸೋಂಕು ಹೆಚ್ಚದಂತೆ ನೋಡಿಕೊಳ್ಳಲು ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು, ರೆಮ್ಡೆಸಿವಿರ್ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರ ಜೊತೆ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ಸಚಿವರಿಗೆ ಸಿಎಂ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
ಕಳೆದ ಐದು ದಿನದಿಂದ ಆಸ್ಪತ್ರೆಯಿಂದಲೇ ಸಚಿವರು, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದ ಸಿಎಂ, ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ವಿಡಿಯೋ ಸಂವಾದದ ಮೂಲಕ ಅಧಿಕೃತ ನಿವಾಸದಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ.