ಬೆಂಗಳೂರು: ಮುನಿರತ್ನ ಅವರನ್ನ ಮಂತ್ರಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮತದಾರರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಮುನಿರತ್ನ ಪರ ನಾಗರಬಾವಿ ಬಳಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮುನಿರತ್ನ ಅವರನ್ನು 50 - 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಯಾವ ಕಾರಣಕ್ಕೂ ಶೇ. 70ಕ್ಕಿಂತ ಕಡಿಮೆ ಮತದಾನ ಆಗಬಾರದು.
ಮುನಿರತ್ನರನ್ನು ಸಚಿವರನ್ನಾಗಿ ಮಾಡಲು ಅವಕಾಶ ಮಾಡಿಕೊಡಿ. ಜಾತಿ, ಕುಲ, ಗೋತ್ರ ಯಾವುದನ್ನೂ ನೋಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಅಂತ ಭೇದ ಭಾವ ಮಾಡಿಲ್ಲ. ಮುನಿರತ್ನ ಬಗ್ಗೆ ನಾವು ಏನೂ ಹೇಳಬೇಕಾಗಿಲ್ಲ. ಅವರ ಕೆಲಸ ಏನು ಅಂತ ಎಲ್ಲರಿಗೂ ಗೊತ್ತಿದೆ. ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನನ್ನ ಹಾಗೂ ಮುನಿರತ್ನ ಮೇಲಿದೆ ಎಂದರು.
ಇದೇ ವೇಳೆ ಮಾತನಾಡಿದ ಮುನಿರತ್ನ, ಕ್ಷೇತ್ರದ ಅಭಿವೃದ್ಧಿ ಜತೆ ಸಿಎಂ ಸದಾ ಇರ್ತಾರೆ. ಮೈಸೂರು ರಸ್ತೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ತರುವ ಕನಸು ನನ್ನದು. ಈ ಕನಸಿಗೆ ಬಜೆಟ್ನಲ್ಲಿ ಹಣ ಇಟ್ಟಿದ್ದಾರೆ ಎಂದರು.
ಕ್ಷೇತ್ರದ ನೆಮ್ಮದಿ ಕೆಡಿಸೋದು ಬೇಡ. ಕ್ಷೇತ್ರದ ನೆಮ್ಮದಿಯ ವಾತಾವರಣ ಹೀಗೇ ಇರಲಿ. ಡಿಜೆ, ಕೆಜಿ ಹಳ್ಳಿ ಪರಿಸ್ಥಿತಿ ನಮಗೆ ಆಗೋದು ಬೇಡ. ಅಲ್ಲಿ ಗಲಭೆ ಖಂಡಿಸಲು ಒಬ್ಬ ಕಾಂಗ್ರೆಸ್ ನಾಯಕ ಇಲ್ಲ. ನನ್ನ ಬಗ್ಗೆ ಕೋಟಿ ಕೋಟಿ ಹಣ ಪಡೆದಿರುವ ಅಪಪ್ರಚಾರ ಮಾಡ್ತಿದ್ದಾರೆ. ಅಪಪ್ರಚಾರ ಮಾಡೋರು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬರಲಿ. ನಾನೂ ಬರ್ತೀನಿ, ಪ್ರಮಾಣ ಮಾಡ್ತೀನಿ ನಾನು. ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಿಹೋಗಲಿ. ನಾನು ದುಡ್ಡಿಗಾಗಿ ಬಿಜೆಪಿಗೆ ಬಂದಿದ್ರೆ ನನ್ನ ಜೊತೆ 16 ಜನ ಯಾಕೆ ಬರ್ತಿದ್ರು ಎಂದು ವಾಗ್ದಾಳಿ ನಡೆಸಿದರು.