ಬೆಂಗಳೂರು : ಡಿಸೆಂಬರ್ 5 ರಂದು ಕರ್ನಾಟಕ ಬಂದ್ ವೇಳೆ ಹಿಂಸಾಚಾರಕ್ಕೆ ಇಳಿದರೆ, ಅನಗತ್ಯ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನ್ನಡಪರ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದ ಬ್ಯಾಂಕ್ವಟ್ ಹಾಲ್ನಲ್ಲಿ ಇಂದು ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮರಾಠ ಸಮುದಾಯ ಅಭಿವೃದ್ಧಿ ನಿಗಮ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಯಾರ ವಿರುದ್ಧವೂ ಇಲ್ಲ. ಎಲ್ಲರನ್ನೂ ಒಂದೇ ರೀತಿ ನೋಡುತ್ತೇವೆ. ಶಾಂತಿಯುತ ಹೋರಾಟಕ್ಕೆ ಅವಕಾಶವಿದೆ. ಅನಾವಶ್ಯಕವಾಗಿ ಬಂದ್ ಮಾಡಿದರೆ ನಾನು ಸಹಿಸುವುದಿಲ್ಲ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಪ್ರತಿಕೃತಿ ದಹಿಸೋದು, ಬಂದ್ ಮಾಡೋದು ಸರಿಯಲ್ಲ. ಶಾಂತಿಯುತ ಹೋರಾಟ ಮಾಡುವಂತೆ ಕನ್ನಡ ಪರ ಹೋರಾಟಗಾರರಿಗೆ ಮನವಿ ಮಾಡಿದರು.
ವಿನಾಕಾರಣ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾತ್ತದೆ. ನಾನು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇರುವಂತಹವನು. ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ನಾನು ಸಿದ್ಧ. ಬೇರೆ ಬೇರೆ ಕಾರಣಗಳಿಗಾಗಿ ಬಂದ್ಗೆ ಕರೆ ಕೊಡುವುದು ಸೂಕ್ತ ಅಲ್ಲ. ರಾಜ್ಯದ ಜನ ಇದನ್ನು ಮೆಚ್ಚುವುದಿಲ್ಲ. ಬಲವಂತದಿಂದ ಎಲ್ಲೂ ಬಂದ್ ಮಾಡಲು ನಾನು ಅವಕಾಶ ಕೊಡಲ್ಲ ಎಂದು ಹೇಳಿದರು.
ಪ್ರತಿಭಟನೆಗೆ ಬೇರೆ ಸ್ವರೂಪ ಕೊಡುವುದು ಬೇಡ. ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಯಾರಿಗೂ ಬೇಧ-ಭಾವ ಮಾಡುತ್ತಿಲ್ಲ. ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಲಿ ಎಂದರು.