ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರದ ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ಅಧಿಕಾರಿಗಳನ್ನು ಅಡಕತ್ತರಿಗೆ ಸಿಲುಕಿಸಿದೆ.
ಇಲಾಖೆಯ ಅನುದಾನ ಹಂಚಿಕೆ ಹಾಗು ಕೆಲವು ಆಡಳಿತಾತ್ಮಕ ವಿಷಯಗಳಲ್ಲಿ ಸಿಎಂ ಯಡಿಯೂರಪ್ಪನವರು, ನಾನು ಮುಖ್ಯಮಂತ್ರಿ ನಾನು ಹೇಳಿದ ಹಾಗೆ ಕೆಲಸ ಮಾಡಿ ಎಂದು ಆದೇಶ ನೀಡುವುದು ಒಂದೆಡೆಯಾದರೆ, ಸಚಿವ ಈಶ್ವರಪ್ಪನವರು ಮುಖ್ಯಮಂತ್ರಿಗಳ ಆದೇಶ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿ, ನಾನು ಇಲಾಖೆಯ ಮಿನಿಸ್ಟರ್ ಮೊದಲು ನಾನು ಹೇಳಿದ ಹಾಗೆ ಕೆಲಸ ಮಾಡಿ ಎಂದು ಆದೇಶ ನೀಡುತ್ತಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಿಎಂ ಮತ್ತು ಇಲಾಖೆ ಸಚಿವರಿಬ್ಬರೂ ಬಹಳ ಹಿರಿಯರು ಹಾಗೂ ಪ್ರಭಾವಶಾಲಿಗಳು ಆಗಿದ್ದರಿಂದ ಮರು ಮಾತನಾಡದೇ, ಆದೇಶ ಪಾಲನೆ ಕಷ್ಟಕರವಾದರೂ ಹೆದರುತ್ತಲೇ ಕೆಲಸ ಮಾಡುವಂತಹ ಸ್ಥಿತಿ ಅಧಿಕಾರಿ ವರ್ಗದ್ದಾಗಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಈಶ್ವರಪ್ಪನವರ ಮೇಲಿನ ಸಿಟ್ಟನ್ನು ಕೆಲವೊಮ್ಮೆ ಅಧಿಕಾರಿಗಳಿಗೆ ತರಾಟೆ ತಗೆದುಕೊಳ್ಳುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಸಚಿವ ಈಶ್ವರಪ್ಪನವರೂ ಸಹ ನೇರವಾಗಿ ಮುಖ್ಯಮಂತ್ರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸುವುದು ಕಷ್ಟವಾಗಿದ್ದರಿಂದ ಸಿಎಂ ಮೇಲಿನ ಮುನಿಸನ್ನು ಅಧಿಕಾರಿಗಳ ಮೇಲೆ ಪ್ರದರ್ಶನ ಮಾಡಿ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ಹೇಳುವ ಕೆಲಸವನ್ನೂ ಮಾಡುತ್ತ ಹಾಗೆಯೇ ಇಲಾಖೆ ಸಚಿವರೂ ನೀಡುವ ಆದೇಶವನ್ನೂ ಪಾಲಿಸುತ್ತಿರುವುದರಿಂದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬಹಳ ಗೊಂದಲ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಆದೇಶಕ್ಕೆ ಇಲಾಖೆ ಸಚಿವರಾಗಿ ಈಶ್ವರಪ್ಪನವರು ಅನುಮೋದನೆ ನೀಡದಿರುವುದು, ನಂತರ ಸಿಎಂ ಯಡಿಯೂರಪ್ಪನವರು ತಮಗಿರುವ ಪರಮಾಧಿಕಾರ ಬಳಸಿ ತಾವಂದುಕೊಂಡ ಕೆಲಸವನ್ನು ಮಾಡುತ್ತಿರುವುದು, ಸಚಿವ ಈಶ್ವರಪ್ಪನವರ ಇಲಾಖೆ ಯೋಜನೆಗಳಿಗೆ ಅನುದಾನ ಕೇಳಿದರೆ ಸೂಕ್ತ ಕಾರಣ ನೀಡಿ ಬಿಡುಗಡೆ ಮಾಡದಿರುವುದು ಸಚಿವ ಈಶ್ವರಪ್ಪನವರನ್ನು ಕೆರಳಿಸಿ ಮುಖ್ಯಮಂತ್ರಿಗಳ ಹಸ್ತಕ್ಷೇಪದ ವಿರುದ್ಧ ರಾಜ್ಯಪಾಲರಿಗೆ ಮತ್ತು ಪಕ್ಷದ ವರಿಷ್ಠರಿಗೆ ದೂರು ನೀಡುವಷ್ಟರ ತನಕ ಹೋಗಿದೆ. ಇಬ್ಬರು ಮುಖಂಡರ ಭಿನ್ನಾಭಿಪ್ರಾಯದಲ್ಲಿ ಅಧಿಕಾರಿಗಳು ಪೇಚಾಡುವಂತಾಗಿದೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ಪತ್ರಕ್ಕೆ ಆಕ್ಷೇಪ: ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತ ಸಚಿವರು