ಬೆಂಗಳೂರು: ಸಂಪುಟ ಪುನಾರಚನೆ ವಿಳಂಬವಾಗುವುದಾದಲ್ಲಿ ವಿಸ್ತರಣೆ ಮಾಡಲು ಅನುಮತಿ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದು, 3+2 ಫಾರ್ಮುಲಾ ಅನುಸರಿಸಿ ಸಂಪುಟ ವಿಸ್ತರಣೆ ಮಾಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದು, ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲಿದ್ದಾರೆ.
ಸಂಪುಟ ಪುನಾರಚನೆಗೆ ಅನುಮತಿ ನೀಡುವುದು ವಿಳಂಬವಾಗುವುದಾದಲ್ಲಿ ಕಳೆದ ಬಾರಿಯಂತೆ ಕೇವಲ ವಿಸ್ತರಣೆ ಮಾಡಲು ಅನುಮತಿ ಕೋರುವುದು. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮತ್ತು ಮತ್ತಿಬ್ಬರನ್ನು ಹೈಕಮಾಂಡ್ ಸೂಚಿಸಿದವರಿಗೆ ಸಚಿವ ಸ್ಥಾನ ನೀಡಿ ಎರಡು ಸ್ಥಾನ ಖಾಲಿ ಇರಿಸಿಕೊಳ್ಳುವುದು ಹಾಗೂ ಶುಕ್ರವಾರ ನೂತನ ಸಚಿವರ ಪ್ರಮಾಣ ವಚನಕ್ಕೆ ಅನುಮತಿ ನೀಡಿಬೇಂಕೆಂಬ ವಿಚಾರಗಳ ಕುರಿತು ಸಿಎಂ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಿಎಂ ಮನವಿಗೆ ಹೈಕಮಾಂಡ್ ಸ್ಪಂಧಿಸಿದಲ್ಲಿ ಶುಕ್ರವಾರ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಸಚಿವರಾಗಲಿದ್ದು ಇನ್ನಿಬ್ಬರು ಯಾರು ಎನ್ನುವುದು ನಿಗೂಢವಾಗಿದೆ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹತ್ತುಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳಲ್ಲಿದ್ದು, ಯಾರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.
ಇದೆಲ್ಲವೂ ಇಂದು ಸಂಜೆ ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ನಡೆಸಲಿರುವ ಮಾತುಕತೆ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.