ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಈ ಕುರಿತಾಗಿ ₹ 50 ಕೋಟಿ ಮಿಸಲಿಡಲು ಸೂಚಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮರಾಠ ಸಮುದಾಯದವರು ಗಣನೀಯ ಪ್ರಮಾಣದಲ್ಲಿ ಇದ್ದು, ಈ ಉಪ ಚುನಾವಣೆಯಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ. ರಾಜಕೀಯ ಲಾಭದ ಲೆಕ್ಕಾಚಾರ ಹಿನ್ನೆಲೆ ಸಿಎಂ ಇದೀಗ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ನಿನ್ನೆ ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮರಾಠ ಸಮುದಾಯದ ನಾಯಕರ ಜೊತೆ ಸಭೆ ನಡೆಸಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲು ನಿರ್ಧರಿಸಿರುವುದು ಗಮನಾರ್ಹವಾಗಿದೆ. ಶಿರಾ ಉಪ ಚುನಾವಣೆ ಸಂದರ್ಭ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರಚಿಸಿ ಸರ್ಕಾರವು ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.