ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಶುಶ್ರೂಷಕರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಮಿಸ್ ಫ್ಲಾರೆನ್ಸ್ ನೈಟಿಂಗೇಲ್ ಅವರ ಇನ್ನೂರನೇ ಹುಟ್ಟುಹಬ್ಬ ಹಾಗೂ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಉದ್ಘಾಟಿಸಿದ ನಂತರ ಮಾತನಾಡಿದ ಸಿಎಂ, ಅನೇಕ ಒತ್ತಡಗಳ ನಡುವೆಯೂ ಶುಶ್ರೂಷಕರು ತಾಳ್ಮೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ವೈದ್ಯರ ಚಿಕಿತ್ಸೆ ಜೊತೆಗೆ, ದಾದಿಯರು ಹಾಗೂ ಶುಶ್ರೂಷಕರು ತೋರುವ ಕಾಳಜಿ ಮತ್ತು ಆರೈಕೆ ರೋಗಿಗಳ ಮನೋಬಲ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ ಶುಶ್ರೂಷಕರಿಗೆ ಅಪಾರ ಪ್ರಮಾಣದ ಬೇಡಿಕೆ ಇದೆ. ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಜೀವದ ಹಂಗು ತೊರೆದು ಅವರು ನೀಡುತ್ತಿರುವ ಸೇವೆ ಇದೇ ರೀತಿ, ಮುಂದುವರಿಯಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಕೆ. ಸುಧಾಕರ್ ಮಾತನಾಡಿ, ಆರೋಗ್ಯ ಸೇವೆಯ ಬೆನ್ನೆಲುಬಿನಂತಿರುವ ಶುಶ್ರೂಷಕರು ಸಲ್ಲಿಸುತ್ತಿರುವ ಸೇವೆ ಅಭಿನಂದನೀಯ. ಕೊರೊನಾ ವಿರುದ್ಧದ ಹೋರಾಟದಲ್ಲಿ ಶುಶ್ರೂಷಕರ ಪಾತ್ರ ದೊಡ್ಡದು. ಇವರ ಸೇವೆ ಇಲ್ಲದೇ ಹೋಗಿದ್ದರೆ ಇಡೀ ವ್ಯವಸ್ಥೆಯೇ ಬುಡಮೇಲು ಆಗಿ ಹೋಗುತ್ತಿತ್ತು ಎಂದು ಹೇಳಿದರು.
ಶ್ರೀಮಂತ ಕುಟುಂಬದಿಂದ ಬಂದಿದ್ದ ಫ್ಲಾರೆನ್ಸ್ ನೈಟಿಂಗೇಲ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ಯೋಧರ ಸೇವೆ ಮಾಡಿದವರು. ರಾತ್ರಿ ವೇಳೆ, ಕಂದೀಲು ಹಿಡಿದು ಇಡೀ ರಾತ್ರಿ ಸೇವೆ ಮಾಡಿದರು. ಇಂತಹ ಧೀಮಂತ ತ್ಯಾಗ ಮಯಿಯ ಜನ್ಮದಿನದ ಶುಭಾಶಯ ತಿಳಿಸಿ, ನಿಮಗೆ ಅಭಿನಂದನೆ ಸಲ್ಲಿಸುತ್ತಿರುವ ಈ ಕಾರ್ಯಕ್ರಮ ಮೆಚ್ಚುವಂಥದ್ದು ಎಂದರು.
ಕೇಂದ್ರ ಸರ್ಕಾರ ನಿಮ್ಮಗಳ ಸೇವೆ ಗುರುತಿಸಿ ಐವತ್ತು ಲಕ್ಷ ವಿಮೆ ಘೋಷಿಸಿದೆ. ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ದೂರವಾಣಿ ಮೂಲಕ ದಾದಿಯರ ಜೊತೆ ಮಾತನಾಡಿ ಮನೋಸ್ಥೈರ್ಯ ತುಂಬಿದ್ದಾರೆ. ನಿಮ್ಮಗಳ ಸೇವೆ ಗುರುತಿಸಿ ದಾದಿಯರು ಶುಶ್ರೂಷಕರು ಎಂದಿದ್ದ ಪದನಾಮ ಬದಲಿಸಿ ಶುಶ್ರೂಷಕ ಅಧಿಕಾರಿಗಳು ಎಂದು ಮರು ಪದನಾಮಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ, ಕುಲಸಚಿವ ಶಿವಾನಂದ, ನರ್ಸಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಶುಶ್ರೂಷಕರು ಈ ಸಂದರ್ಭದಲ್ಲಿ ಹಾಜರಿದ್ದರು.