ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಹೈಕಮಾಂಡ್ ಭೇಟಿಗೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆಯಿಂದ (ಸೆ.17) ಮೂರು ದಿನಗಳ ನವದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ನಾಳೆ ಬೆಳಗ್ಗೆ 7 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಸಿಎಂ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದು, ನಂತರ 11 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1.20ಕ್ಕೆ ನವದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಅಲ್ಲಿಂದ ನೇರವಾಗಿ ಕರ್ನಾಟಕ ಭವನಕ್ಕೆ ತೆರಳಲಿದ್ದು, ಕೆಲ ಕಾಲ ವಿಶ್ರಾಂತಿ ಪಡೆದುಕೊಳ್ಳುವರು. ನಂತರ ಕೇಂದ್ರದ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ನಾಳೆ ರಾತ್ರಿ ಕರ್ನಾಟಕ ಭವನದಲ್ಲೇ ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಸೆ.18ರಂದು ಬೆಳಗ್ಗೆ 9 ಗಂಟೆಗೆ ಕರ್ನಾಟಕ ಭವನದಲ್ಲಿ ಕಾವೇರಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಮಧ್ಯಾಹ್ನದ ನಂತರ ಕೇಂದ್ರದ ಸಚಿವರೊಂದಿಗೆ ಸಭೆ ನಡೆಸಲಿದ್ದು, ರಾಜ್ಯಕ್ಕೆ ನೆರೆಹಾನಿ ಪರಿಹಾರ ಬಿಡುಗಡೆ ಕುರಿತು ಚರ್ಚೆ ನಡೆಸಲಿದ್ದಾರೆ. ನಷ್ಟದ ಪ್ರಮಾಣವನ್ನು ಸವಿಸ್ತಾರವಾಗಿ ವಿವರಿಸಿ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಿದ್ದಾರೆ. ಅಂದು ರಾತ್ರಿಯೂ ಕರ್ನಾಟಕ ಭವನದಲ್ಲಿಯೇ ಸಿಎಂ ವಾಸ್ತವ್ಯ ಮಾಡಲಿದ್ದಾರೆ.
ಸೆ.19ರಂದು ಕೇಂದ್ರದ ಸಚಿವರೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ. ನಂತರ ಹೈಕಮಾಂಡ್ ನಾಯಕರನ್ನು ಸಿಎಂ ಭೇಟಿಯಾಗಿ, ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ. ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಹಾಗು ಸಚಿವರ ಪಟ್ಟಿಗೆ ಅನುಮತಿ ಪಡೆಯಲಿದ್ದಾರೆ ಎನ್ನಲಾಗಿದೆ.