ಬೆಂಗಳೂರು: ಈ ವಾರಾಂತ್ಯಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬಳಿಕ ರಾಜ್ಯದಲ್ಲಿಯೂ ಸಂಪುಟ ಸರ್ಜರಿ ನಡೆಯುವ ಸಾಧ್ಯತೆ ಇದೆ.
ಜನವರಿಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದ ಸಿಎಂ ಬಿಎಸ್ವೈ, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬಂದಿದ್ದರು. ನಂತರ ನಾಯಕತ್ವ ಬದಲಾವಣೆ ಗೊಂದಲ ಉಂಟಾಗಿತ್ತು. ಆ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದ ಸಿಎಂ, ಇದೀಗ ಮತ್ತೆ ಸಂಪುಟ ವಿಷಯವನ್ನಿಟ್ಟುಕೊಂಡು ದೆಹಲಿಗೆ ತೆರಳಲು ಮುಂದಾಗಿದ್ದಾರೆ.
ಶುಕ್ರವಾರ ಅಥವಾ ಶನಿವಾರ ಸಿಎಂ ದೆಹಲಿಗೆ ತೆರಳುವ ಸಾಧ್ಯತೆಯ ಇದ್ದು, ಪ್ರಧಾನಿ ಮೋದಿ, ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಿಗದಿಪಡಿಸುವ ಸಮಯದ ಮೇಲೆ ಸಿಎಂ ಪ್ರವಾಸ ನಿರ್ಧರಿತವಾಗಿದೆ.
ಓದಿ : ನಾಳೆ ದಕ್ಷಿಣ ಭಾರತ ರಾಜ್ಯಗಳ ಸಿಎಂಗಳ ಜತೆ ಪಿಎಂ ವಿಡಿಯೋ ಸಂವಾದ: CM BSY ಭಾಗಿ
ಅಸಮರ್ಥರು, ಕೋವಿಡ್ ಸಮಯದಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರಿಗೆ ಸಂಪುಟದಿಂದ ಕೊಕ್ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು, ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರ ಪಟ್ಟಿಯಲ್ಲಿ ಉಳಿದುಕೊಂಡಿರುವ ಮುನಿರತ್ನ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬುವುದು ಸೇರಿದಂತೆ ಹಲವು ಪ್ರಸ್ತಾಪಗಳನ್ನುಸಿಎಂ ವರಿಷ್ಠರ ಮುಂದಿಡಲಿದ್ದಾರೆ ಎಂದು ಹೇಳಲಾಗ್ತಿದೆ.
ಪದೇ ಪದೆ ನಾಯಕತ್ವ ಬದಲಾವಣೆ ವದಂತಿ ಹಬ್ಬಿಸುವ ಪ್ರಕ್ರಿಯೆಗೆ ಬ್ರೇಕ್ ಹಾಕಲು ಅರವಿಂದ ಬೆಲ್ಲದ್ಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಸಿಎಂ ವಿರುದ್ಧ ಆಗಾಗ ಸಿಎಂ ವಿರುದ್ಧ ಕೆಂಡ ಕಾರುವ ಸಿ.ಪಿ ಯೋಗೀಶ್ವರ್ಗೆ ಸಂಪುಟದಿಂದ ಕೊಕ್ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಆದರೆ, ಇವೆಲ್ಲಾ ವರಿಷ್ಠರ ನಿರ್ಧಾರದ ಮೇಲೆ ನಿಂತಿದೆ.
ವರಿಷ್ಠರು ಸದ್ಯಕ್ಕ ಸಂಪುಟ ಪುನರ್ ರಚನೆ ಬೇಡ ಎಂದರೆ, ಸಂಪುಟ ವಿಸ್ತರಣೆಗೆ ಅವಕಾಶ ಕೊಡಿ. ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದನ್ನು ಮುನಿರತ್ನಗೆ ನೀಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನುಳಿದಂತೆ, ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತು ಕೇಂದ್ರದ ಸಚಿವರನ್ನು ಭೇಟಿಯಾಗಿ ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ. ಹೆದ್ದಾರಿ ಯೋಜನೆಗಳ ಕುರಿತು ಸಚಿವ ನಿತಿನ್ ಗಡ್ಕರಿ, ಮೇಕೆದಾಟು ಸೇರಿ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಚರ್ಚೆ ನಡೆಸಲಿದ್ದಾರೆ.
ಹೆಚ್ಚಿನ ಲಸಿಕೆ ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಸಿಎಂ ಮನವಿ ಮಾಡಲಿದ್ದು, ರಾಜ್ಯದಿಂದ ಆಯ್ಕೆಯಾದ ನೂತನ ಸಚಿವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.