ಬೆಂಗಳೂರು: ಶಾಸಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ಸಮಾಲೋಚನಾ ಸಭೆಯಲ್ಲಿ ವಲಸಿಗ ಸಚಿವರಿಗೆ ಶಹಬ್ಬಾಸ್ಗಿರಿ ಸಿಕ್ಕಿದ್ದು, ಶಾಸಕರಿಗೆ ಸ್ಪಂದಿಸುವ ರೀತಿಯನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.
ಬಿಜೆಪಿ ಶಾಸಕರ ಜೊತೆ ಸಿಎಂ ನಡೆಸಿದ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಸಚಿವರು ಅವರ ಕ್ಷೇತ್ರಗಳಿಗಷ್ಟೇ ಮಂತ್ರಿಗಳಾಗಬೇಕಿತ್ತೇನೋ, ಆದರೆ ತಪ್ಪಿ ಅವರು ರಾಜ್ಯಕ್ಕೆ ಮಂತ್ರಿಗಳಾಗಿದ್ದಾರೆ. ನಮಗೆ ಏನೂ ಕೆಲಸಗಳು ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಲಸೆ ಬಂದು ಸಚಿವರಾದವರು ವಾಟ್ಸಪ್ ಮೆಸೇಜ್ ಮಾಡಿದರೆ ಸಾಕು ಕೆಲಸ ಮಾಡಿಕೊಡುತ್ತಾರೆ. ಆದರೆ ನಮ್ಮದೇ ಪಕ್ಷದಿಂದ ಕೆಲವರು ಸಚಿವರಾದವರು ಮಾತ್ರ ಕೆಲಸ ಮಾಡಿಕೊಡುತ್ತಿಲ್ಲ. ನಾವೂ ಕೂಡ ಹಿಂದೆ ನಿಮ್ಮ ಸರ್ಕಾರದಲ್ಲಿ ಸಚಿವರಾಗಿ ಸ್ವಲ್ಪಮಟ್ಟಿಗೆ ಕೆಲಸ ಮಾಡಿದ್ದೇವೆ. ಸಚಿವ ಸ್ಥಾನ ಹೇಗೆ ನಿರ್ವಹಣೆ ಮಾಡುವುದು ಅಂತಾ ನಮಗೂ ಗೊತ್ತಿದೆ. ಸಚಿವರಿಗೆ ನೀವು ನಿರ್ದೇಶನ ಕೊಡಿ ಎಂದು ಸಿಎಂಗೆ ಆಗ್ರಹಿಸಿದರು.
ನಂತರ ಮೂಲ ಮತ್ತು ವಲಸಿಗ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಎಲ್ಲರೂ ಬಿಜೆಪಿ ಸದಸ್ಯರು. ಇದರಲ್ಲಿ ಭೇದಭಾವವಿಲ್ಲ, ಎಲ್ಲಾ ಸಚಿವರೂ ಶಾಸಕರ ಸಮಸ್ಯೆ ಆಲಿಸಲಿದ್ದಾರೆ. ಏನೇ ಸಮಸ್ಯೆ ಆದರೂ ನನ್ನ ಗಮನಕ್ಕೆ ತನ್ನಿ ಸರಿಪಡಿಸುತ್ತೇನೆ. ಕೃಷ್ಣಾ, ಕಾವೇರಿ ಬಾಗಿಲು ಸದಾ ತೆರೆದಿರಲಿದೆ ಎಂದು ಸಿಎಂ ಯಡಿಯೂರಪ್ಪ ಅಭಯ ನೀಡಿದರು.
ಮುಂದುವರೆದು ಶಾಸಕರಿಗೆ ಅನುದಾನ ಕೊಡಿ, ಅನುದಾನ ಕಡಿತ ಮಾಡಬೇಡಿ ಎಂದು ಬಹುತೇಕ ಶಾಸಕರು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ ಸಿಎಂ, ಅನುದಾನ ನೀಡುತ್ತೇನೆ. ತಕ್ಷಣಕ್ಕೆ ಕಷ್ಟ, ಕೋವಿಡ್ ಪರಿಸ್ಥಿತಿ ನಿಮಗೆ ಗೊತ್ತೇ ಇದೆ ಎಂದು ಸಮಾಧಾನ ಹೇಳಿದರು.
ಸಭೆಗೆ ಗೈರಾದವರು
ಎರಡು ದಿನಗಳ ಬಿಜೆಪಿ ಶಾಸಕರ ಸಭೆಗೆ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಜೆ.ಸಿ.ಮಾಧುಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ್ ಮಾಮನಿ, ಶಾಸಕರಾದ ಸೋಮಶೇಖರ ರೆಡ್ಡಿ ಮತ್ತು ಎನ್.ವೈ.ಗೋಪಾಲಕೃಷ್ಣ ಗೈರಾಗಿದ್ದರು.
ಇಸನ್ನೂ ಓದಿ: ಯತ್ನಾಳ್ ಬಿಟ್ಟು ಎಲ್ಲರಿಂದಲೂ ಬೆಂಬಲ, ಸಿಎಂ ಕಾರ್ಯಕ್ಕೆ ತೃಪ್ತಿ: ಗೋವಿಂದ ಕಾರಜೋಳ