ಬೆಂಗಳೂರು: ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಕುರಿತು ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ, ಸಾಧಕ-ಬಾಧಕಗಳನ್ನು ನೋಡಿಕೊಂಡೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೋವಿಡ್ ನಡುವೆ ಶಾಲೆಗಳನ್ನು ಪುನಾರಂಭಿಸುವ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾಧ್ಯಮಗಳು ಕೂಡ ಅಭಿಯಾನಗಳನ್ನು ಪ್ರಾರಂಭಿಸಿರುವುದನ್ನು ಗಮನಿಸಿರುತ್ತೇನೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೂಡ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಪುನಾರಂಭಿಸುವ ಮುನ್ನ, ಎಲ್ಲಾ ಪಕ್ಷಗಳ ಮುಖಂಡರು, ತಜ್ಞರು, ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಶಾಲೆಗಳನ್ನು ತೆರೆಯುವ ಬಗ್ಗೆ ಉಂಟಾಗಿರುವ ಉಹಾ ಪೋಹಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದು ಪೋಷಕರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮಗಳಲ್ಲಿ ಕೋರುತ್ತೇನೆ ಎಂದು ಸಿಎಂ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.