ಬೆಂಗಳೂರು: ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಸನ್ನದ್ಧರಾಗುವ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳ ಸಭೆ ಕರೆದಿದ್ದಾರೆ.
ನಾಳೆ ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ ಸಭೆ ನಡೆಯಲಿದೆ. ಸದನದಲ್ಲಿ ಸರ್ಕಾರವನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.

ಸರ್ಕಾರ ರಚನೆಯಾಗಿ ಒಂದು ವರ್ಷ ಆಗಿರುವ ಕಾರಣ ಈ ಅಧಿವೇಶನ ಮಹತ್ವದ್ದಾಗಲಿದೆ. ಹಾಗಾಗಿ ವರ್ಷ ಪೂರ್ಣಗೊಳಿಸಿರುವ ಸಚಿವರು ತಮ್ಮ ಇಲಾಖೆಯ ವರ್ಷದ ಸಾಧನೆಯ ವಿವರದೊಂದಿಗೆ ಪ್ರತಿಪಕ್ಷ ಸದಸ್ಯರನ್ನು ಎದುರಿಸಲು ಸಿದ್ಧರಾಗುವ ಕುರಿತು ಸಿಎಂ ಸೂಚನೆ ನೀಡಲಿದ್ದಾರೆ.
ನೆರೆ ಹಾಗೂ ಕೊರೊನಾ ಪ್ರಕರಣ ನಿರ್ವಹಣೆ ಕುರಿತು ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಹಾಗಾಗಿ ಪ್ರತಿಪಕ್ಷಗಳ ಟೀಕೆಯನ್ನು ಸಮರ್ಥವಾಗಿ ನಿಭಾಯಿಸುವ, ಸಮರ್ಥವಾದ ಅಂಕಿ-ಅಂಶ ಹಾಗೂ ಮಾಹಿತಿ ನೀಡಿ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಹೀಗಾಗಿ ಎಲ್ಲಾ ರೀತಿಯಲ್ಲೂ ಪ್ರತಿಪಕ್ಷಗಳನ್ನು ಎದುರಿಸಲು ಯಾವ ರೀತಿ ಸಜ್ಜುಗೊಳ್ಳಬೇಕು ಎನ್ನುವ ಕುರಿತು ಮಹತ್ವದ ಚರ್ಚೆ ನಡೆಯಲಿದೆ.